ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಭಟನಾ ನಿರತ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರ ಮಧ್ಯೆ 4ನೇ ಸುತ್ತಿನ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಕುರಿತು ಕೇಂದ್ರ ಸರ್ಕಾರ ಹೊಸ ಆಫರ್ ನೀಡಿದ್ದು, ಈ ವಿಚಾರದ ಬಗ್ಗೆ ರೈತ ಸಂಘಟನೆಗಳು ಚಿಂತನೆ ನಡೆಸಲು ಮುಂದಾಗಿವೆ. ಹೀಗಾಗಿ ದೆಹಲಿಯ ಶಂಭು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ದೊರಕಿದೆ.
ಈ ಮೊದಲು ನಡೆದ 3 ಸುತ್ತಿನ ಮಾತುಕತೆಯಲ್ಲಿ, ರೈತರ ಮೇಲಿನ ಕೇಸು ವಾಪಸ್, ಮೃತ ರೈತರಿಗೆ ಪರಿಹಾರ ವಿತರಣೆ ಮೊದಲಾದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಸಮ್ಮತಿಸಿತ್ತು. ಆದರೆ ಕನಿಷ್ಠ ಖಾತರಿ ಬೆಲೆಗೆ ಕಾನೂನಿನ ಮಾನ್ಯತೆ, ರೈತರು, ಕೃಷಿ ಕಾರ್ಮಿಕರಿಗೆ ಪಿಂಚಣಿ ಮೊದಲಾದ ವಿಷಯಗಳ ಬಗ್ಗೆ ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮಧ್ಯೆ ಭಿನ್ನಾಭಿಪ್ರಾಯ ಮುಂದುವರೆದಿತ್ತು.
ಇದೀಗ ಜೋಳ ಹತ್ತಿ ಹಾಗೂ ದ್ವಿದಳ ಧಾನ್ಯಗಳು ಸೇರಿ ಹಲವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಹೊಸ ಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ವೆಬ್ ಪೋರ್ಟಲ್ ಸ್ಥಾಪಿಸಲಿದೆ. ಹಾಗೂ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಯಾವುದೇ ಮಿತಿ ಇಲ್ಲ ಸೇರಿದಂತೆ ಹಲವು ಆಫರ್‌ಗಳನ್ನು ಕೇಂದ್ರ ಪ್ರತಿಭಟನಾನಿರತ ರೈತರಿಗೆ ತಿಳಿಸಿದೆ.
ಈ ಸಂಧಾನದ ನಂತರ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ನಾವು ಜೊತೆಯಾಗಿ ಬಹಳ ನಾವೀನ್ಯಪೂರ್ಣ ಹಾಗೂ ಔಟ್ ಆಫ್ ಬಾಕ್ಸ್ ಐಡಿಯಾಗಳನ್ನು ನೀಡಿದ್ದೇವೆ. ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರ್ಕೆಟಿಂಗ್ ಫೆಡರೇಶನ್‌ನಂತಹ ಸರ್ಕಾರವು ಉತ್ತೇಜಿಸಿದ ಸಹಕಾರಿ ಸಂಘಗಳು ಮುಂದಿನ 5 ವರ್ಷಗಳವರೆಗೆ ಒಪ್ಪಂದವನ್ನು ರೂಪಿಸುತ್ತವೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತೇವೆ. ಉತ್ಪನ್ನ ಖರೀದಿಯ ಪ್ರಮಾಣದಲ್ಲಿ ಯಾವುದೇ ಮಿತಿ ಇಲ್ಲ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ಕೃಷಿ ಖಾತೆ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಹಾಗೂ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಭಾಗಿಯಾಗಿದ್ದರು. ಮತ್ತೊಂದೆಡೆ ಪಂಜಾಬ್ ಮತ್ತು ಹರ್ಯಾಣದ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಪರವಾಗಿ ಹಲವು ರೈತ ನಾಯಕರು ಭಾಗಿಯಾಗಿದ್ದರು. ಈ ನಡುವೆ ದೆಹಲಿ ಚಲೋಗಾಗಿ ಆಗಮಿಸಿದ್ದ ರೈತರು ಪಂಜಾಬ್ ಮತ್ತು ಹರ್ಯಾಣದ ಗಡಿ ಭಾಗವಾದ ಶಂಭು ಬಳಿಯೇ ವಾಸ್ತವ್ಯ ಮುಂದುವರೆಸಿದ್ದಾರೆ.