ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರದೇಶದಲ್ಲಿ ಪಾಠ ಕಲಿಸಿದ ಗುರುವಿಗೆ ಇಬ್ಬರು ವಿದ್ಯಾರ್ಥಿಗಳು ಗುಂಡು ಹಾರಿಸಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಮಧ್ಯ ಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯ ಜೌರಾ ರಸ್ತೆ ಪ್ರದೇಶದಲ್ಲಿ ಗುಂಡೇಟು ತಿಂದ ಶಿಕ್ಷಕರು ಇಬ್ಬರು ವಿದ್ಯಾರ್ಥಿಗಳಿಗೆ ಮೂರು ವರ್ಷದ ಹಿಂದೆ ಪಾಠ ಮಾಡಿದ್ದರು.
ಟ್ಯೂಷನ್ ಫೀಸ್ ಕಟ್ಟದ ಈ ಇಬ್ಬರೂ ವಿದ್ಯಾರ್ಥಿಗಳು ಮೂರು ವರ್ಷಗಳಿಂದ ಶಿಕ್ಷಕರಿಗೆ ಸತಾಯಿಸುತ್ತಿದ್ದರು. ಇದೀಗ ಶಿಕ್ಷಕರಿಗೆ ವಿದ್ಯಾರ್ಥಿಗಳು ಎದುರಾದ ಸಂದರ್ಭದಲ್ಲಿ ಶಿಕ್ಷಕರು ಟ್ಯೂಷನ್ ಫೀಸ್ ಕೊಡಲೇ ಬೇಕು ಎಂದು ಆಗ್ರಹಿಸಿದರು. ಆಗ ಸಿಟ್ಟಿಗೆದ್ದ ವಿದ್ಯಾರ್ಥಿಗಳು ತಮ್ಮ ಬಳಿ ಇದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ.
ಗಾಯಗೊಂಡಿರುವ ಶಿಕ್ಷಕರನ್ನು ಗಿರ್ವಾರ್ ಸಿಂಗ್ ಎಂದು ಗುರುತಿಸಿದ್ದು, ಕಳೆದ ಬುಧವಾರ ಸಂಜೆ ವೇಳೆಗೆ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಇದ್ದ ಸಿಸಿಟಿವಿಯಲ್ಲಿ ಗುಂಡು ಹಾರಿಸಿದ ಘಟನೆ ಚಿತ್ರೀಕರಣವಾಗಿದ್ದು, ಪೊಲೀಸರ ಕೈಗೆ ಸಿಕ್ಕಿದೆ.
ಗುಂಡೇಟು ತಿಂದ ಶಿಕ್ಷಕ ಗಿರ್ವಾರ್ ಸಿಂಗ್ ಅವರು ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಈ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ವಿದ್ಯಾರ್ಥಿಗಳು ತರಬೇತಿ ಅವಧಿ ಮುಗಿದು ಮೂರು ವರ್ಷವಾದರೂ ಶುಲ್ಕವನ್ನೇ ಭರಿಸಿರಲಿಲ್ಲ. ಹೀಗಾಗಿ, ದ್ವಿಚಕ್ರ ವಾಹನದಲ್ಲಿ ವಿದ್ಯಾರ್ಥಿಗಳು ಹೋಗುತ್ತಿದ್ದ ವೇಳೆ ಅವರನ್ನು ಶಿಕ್ಷಕ ತಡೆದಾಗ ಮಾತಿಗೆ ಮಾತು ಬೆಳೆದು ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಶಿಕ್ಷಕರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ನ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದ ಬಳಿಕ ಪೊಲೀಸರು ಶಿಕ್ಷಕರನ್ನು ವಿಚಾರಿಸಿದ್ದಾರೆ.