ಹೊಸದಿಗಂತ ವರದಿ ಹುಬ್ಬಳ್ಳಿ:
ಪ್ರಸ್ತುತ ದುಡ್ಡಿನ ಮತ್ತು ಜಾತಿಯ ರಾಜಕಾರಣವೇ ವಿಜೃಂಭಿಸುತ್ತಿದೆ. ಚುನಾವಣೆ ಸ್ಪರ್ಧಿಸಬೇಕೆಂದರೆ ಎಷ್ಟು ಹಣ ಇದೆ ಎಂದು ಕೇಳುತ್ತಾರೆ. ಈಗ ಪಕ್ಷಕ್ಕಿಂತ, ಅದರ ನಾಯಕರು ಪ್ರಬಲರಾಗಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಹೆಚ್.ವಿಶ್ವನಾಥ ಆರೋಪಿಸಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರು ಚುನಾವಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿರುತ್ತಾಳೆ. ಅವರು ಟಿಕೆಟ್’ಗಾಗಿ ₹10 ಕೋಟಿ ನೀಡಲು ಸಹ ಸಿದ್ಧರಿದ್ದಾರೆ. ಹಿಂದಿನ ಹೋರಾಟ ಮತ್ತು ಚಳವಳಿಗಳನ್ನು ಸ್ವಾಮೀಜಿಗಳ ಕೈಗಳಿಗೆ ಕೊಟ್ಟಿದ್ದೇವೆ. ಮೀಸಲಾತಿ ಕುರಿತು ಸಹ ಅವರೇ ಚಳವಳಿ ಮಾಡುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಆತ್ಮವೇ ಚುನಾವಣೆ. ಆದರೆ, ಎಲ್ಲ ಪಕ್ಷದ ಮುಖಂಡರು ಮ್ಯಾಜಿಕ್ ನಂಬರ್ ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಮ್ಯಾಜಿಕ್ ನಂಬರ್ ನಿರ್ಣಯಿಸುವವರು ಮತದಾರರು. ಆದರೆ, ಬಿಜೆಪಿ ತನಗೆ ಯಾರು ಮತ ನೀಡುವುದಿಲ್ಲವೋ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತಿದೆ. ಇಂತಹ ಅಯೋಗ್ಯತನ ರಾಜಕೀಯವನ್ನು ನಾ ಜೀವನದಲ್ಲಿ ಕಂಡಿಲ್ಲ. ಮತದಾರರ ಹಕ್ಕನ್ನೇ ಕಸಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಜನತಂತ್ರ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನವಿದು’ ಎಂದು ಆಕ್ರೋಶ ಹೊರಹಾಕಿದರು.
ಧಮ್ ಇದ್ರೆ, ತಾಕತ್ತಿದ್ರೆ ಎನ್ನುವ ಮಾತುಗಳು, ರಾಜಕಾರಣಿಗಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತೋರಿಸಿಕೊಡುತ್ತಿವೆ. ಹೀಗಿದ್ದಾಗ ಅವರು ಮತದಾರರ ಬಳಿ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ? ಇವರ ಮಾತುಗಳು ಯುವಕರಿಗೆ, ಮತದಾರರಿಗೆ, ರಾಜಕಾರಣಕ್ಕೆ ಅಥವಾ ಆಡಳಿತಕ್ಕೆ ಆದರ್ಶವೇ’ ಎಂದು ಪ್ರಶ್ನಿಸಿದರು.