ಬಾಲಿವುಡ್ ನಟಿಯರಾದ ಕಾಜೋಲ್ ಮತ್ತು ಲೇಖಕಿಯಾಗಿಯೂ ಪ್ರಸಿದ್ಧಳಾದ ಟ್ವಿಂಕಲ್ ಖನ್ನಾ, ಇದೀಗ ಟಾಕ್ ಶೋ ಹೋಸ್ಟ್‌ಗಳಾಗಿ ತಮ್ಮ ಹೊಸ ಪಯಣವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ‘ಟು ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್’ ಎಂಬ ಟಾಕ್ ಶೋ ಶೀಘ್ರದಲ್ಲೇ ಪ್ರೈಮ್ ವಿಡಿಯೋನಲ್ಲಿ ಸ್ಟ್ರೀಮ್ ಆಗಲಿದ್ದು, ಇದರಿಂದ ಪ್ರೇಕ್ಷಕರು ಹಾಸ್ಯಮಯ, ಸಂಭಾಷಣೆಯೊಂದಿಗೆ ಮನರಂಜನೆಯ ಹೊಸ ಅನುಭವ ಪಡೆಯಲಿದ್ದಾರೆ.
ಈ ಶೋದಲ್ಲಿ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಅವರ ನಿಜವಾದ ವ್ಯಕ್ತಿತ್ವ, ನಡವಳಿಕೆ ಹಾಗೂ ವ್ಯಂಗ್ಯ ಭರಿತ ಮಾತುಕತೆ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಳ್ಳಲಿವೆ. ಶೋನಲ್ಲಿ ಇಬ್ಬರು ತಮ್ಮ ವೈಯಕ್ತಿಕ ಜೀವನದ ಘಟನೆಗಳು, ವೃತ್ತಿಜೀವನದ ಸವಾಲುಗಳು, ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ನೈಜ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
‘ಟು ಮಚ್’ ಕಾರ್ಯಕ್ರಮವು ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾದ ಸಹಯೋಗದಲ್ಲಿ ನಿರ್ಮಾಣವಾಗುತ್ತಿದೆ. ಈ ಶೋನ ಬಗ್ಗೆ ನಿರ್ಮಾಪಕಿ ಮೃಣಾಲಿನಿ ಜೈನ್ ಮಾತನಾಡಿದ್ದು, “ಇದು ಕೇವಲ ಟಾಕ್ ಶೋ ಅಲ್ಲ, ಇದು ತೀಕ್ಷ್ಣ ಮನಸ್ಸಿನ ಕಲಾವಿದರ ನೈಜ ವ್ಯಕ್ತಿತ್ವಗಳ ಪರ್ವ. ಕಾಜೋಲ್ ಮತ್ತು ಟ್ವಿಂಕಲ್ ಅವರು ತಮ್ಮ ವಿಶಿಷ್ಟ ಧ್ವನಿಯ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ ಎಂಬಲ್ಲಿ ಯಾವುದೇ ಸಂಶಯವಿಲ್ಲ,” ಎಂದು ಹೇಳಿದ್ದಾರೆ.
ಶೋದಲ್ಲಿ ಭಾಗವಹಿಸಬಹುದಾದ ಅತಿಥಿಗಳ ಪಟ್ಟಿಯಲ್ಲೂ ಭಾರತೀಯ ಚಿತ್ರರಂಗದ ಹಲವು ದೊಡ್ಡ ಹೆಸರುಗಳೆಲ್ಲವೂ ಸೇರಿದೆ. ಬಾಲಿವುಡ್‌ನ ಇಬ್ಬರು ಪ್ರಭಾವಿ ಮಹಿಳೆಯರು, ವಿಭಿನ್ನ ದೃಷ್ಟಿಕೋನ ಮತ್ತು ಹಂಚಿಕೊಂಡ ಅನುಭವಗಳೊಂದಿಗೆ, ಭಾರತೀಯ ಟಾಕ್ ಶೋ ಪ್ರಕಾರಕ್ಕೆ ಹೊಸ ಜೀವ ತುಂಬಲಿದ್ದಾರೆ ಎಂಬ ನಿರೀಕ್ಷೆ ಮೂಡುತ್ತಿದೆ.