ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಇದೀಗ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ. ಆಡಳಿತಾರೂಢ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷ ಮತ್ತು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದೆ.
ಆರೋಗ್ಯ ಸೇವಾ ಅನುದಾನದ ಭಿನ್ನಾಭಿಪ್ರಾಯದಿಂದ ಮಧ್ಯಂತರ ಅನುದಾನದ ಮಸೂದೆಗೆ ಬಹುಮತ ಸಿಗದೇ ಬಿಲ್ ಪಾಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಶಟ್‌ಡೌನ್ ಆಗಿದ್ದು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದೆ.
ಅಫೋರ್ಡಬಲ್ ಕೇರ್ ಆಕ್ಟ್ ಅಂದರೆ ಒಬಾಮಾಕೇರ್ ಅಡಿಯಲ್ಲಿ ಲಕ್ಷಾಂತರ ಜನರಿಗೆ ನೀಡಲಾಗುತ್ತಿರುವ ಹೆಲ್ತ್ ಇನ್ಸೂರೆನ್ಸ್ ಸಬ್ಸಿಡಿಗಳನ್ನು ಮುಂದುವರಿಸಬೇಕು ಎನ್ನುವುದು ಡೆಮಾಕ್ರೆಟಿಕ್‌ಗಳ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ರಿಪಬ್ಲಿಕನ್ನರು ಒಪ್ಪದ ಕಾರಣ ಸೆನೆಟ್‌ನಲ್ಲಿ 55-45 ಮತಗಳ ಅಂತರದಿಂದ ಬಿಲ್ ಬಿದ್ದು ಹೋಯಿತು. ಇದರ ಪರಿಣಾಮವಾಗಿ ಆಡಳಿತ ಕಾರ್ಯನಿರ್ವಹಣೆಗೆ ಸರ್ಕಾರದ ಬಳಿ ಹಣವಿಲ್ಲದೇ ಬುಧವಾರ ಮಧ್ಯರಾತ್ರಿ 12:01ಕ್ಕೆ ಅಧಿಕೃತವಾಗಿ ಶಟ್‌ಡೌನ್ ಘೋಷಿಸಲಾಗಿದೆ.
ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳು ಮುಂದುವರಿಯಲಿದ್ದು ಕಾನೂನಿನ ಪ್ರಕಾರ, ಅಗತ್ಯ ಸೇವೆಗಳ ನೌಕರರು ಕೆಲಸ ಮಾಡಲೇಬೇಕು. ಆದರೆ ಅವರಿಗೆ ಶಟ್‌ಡೌನ್ ಮುಗಿಯುವವರೆಗೂ ವೇತನ ಸಿಗುವುದಿಲ್ಲ. ಸೇನಾ ಸಿಬ್ಬಂದಿ, ಗಡಿ ಭದ್ರತಾ ಪಡೆ, ಮತ್ತು ಕಾನೂನು ಜಾರಿ ಸಂಸ್ಥೆಗಳು ಕರ್ತವ್ಯದಲ್ಲಿರುತ್ತವೆ.