ಹೊಸದಿಗಂತ ಡಿಜಿಟಲ್ ಡೆಸ್ಕ್
ಜಲ ಜೀವನ್ ಮಿಷನ್ 2.0 ವಿಸ್ತರಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಿರ್ಣಯಗಳ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 8.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಜಲಜೀವನ್ ಮಿಷನ್ ಯೋಜನೆಯಲ್ಲಿ ಡಿಜಿಟಲೀಕರಣ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುವುದು ಎಂದರು.
2019ರಿಂದ 2024ರವರೆಗಿನ ಜಲಜೀವನ್ ಮಿಷನ್ ಯೋಜನೆಯನ್ನು 2028ರ ಡಿಸೆಂಬರ್ ವರೆಗೆ ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದ ಗ್ರಾಮೀಣ ಭಾಗದ 12 ಕೋಟಿ 60 ಲಕ್ಷ ಮನೆಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುವುದು. ಸ್ವಸಹಾಯ ಗುಂಪುಗಳು, ಲಖ್ ಪತಿ ದೀದಿ, ಗ್ರಾಮ ಪಂಚಾಯತಿ ಸದಸ್ಯರು, ನಾಗರಿಕರು ಸೇರಿದಂತೆ ಎಲ್ಲರನ್ನು ಈ ಯೋಜನೆಯಡಿ ಭಾಗಿದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಸಮುದಾಯ ಕೇಂದ್ರಿತ ಯೋಜನೆಯಲ್ಲಿ ಅಂತರ್ಜಲ ಹೆಚ್ಚಳ ಮತ್ತು ನೀರಿನ ಗುಣಮಟ್ಟ ಏರಿಕೆಗೆ ಆದ್ಯತೆ ನೀಡಲಾಗಿದೆ. ಯೋಜನೆ ಸಂಬಂಧ ರಾಜ್ಯಗಳೊಂದಿಗೆ ಶೀಘ್ರ ಒಡಂಬಡಿಕೆ ಏರ್ಪಡಲಿದೆ ಎಂದು ತಿಳಿಸಿದರು. ಇದಲ್ಲದೇ ತಮಿಳುನಾಡಿನ ಮದುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಶ್ರೇಣಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾದ ಮದುರೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಿಂದ ಪ್ರಾದೇಶಿಕ ಅಭಿವೃದ್ಧಿ ಜೊತೆಗೆ ಸಮೀಪದ ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.



