ಹೊಸದಿಗಂತ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರನ್ನು ಸಂತ್ರಸ್ತರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆದಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಭಾನುವಾರ ಶಾಸಕ ಡಾ.ಮಂಥರ್ ಗೌಡ ಹಾಗೂ ಅಧಿಕಾರಿಗಳೊಂದಿಗೆ ಸಚಿವರು ತೆರಳಿದ್ದರು. ಈ ಸಂದರ್ಭ 2018ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಮನೆಮಠ ಕಳೆದುಕೊಂಡು, ಪ್ರಸಕ್ತ ಸೋಮವಾರಪೇಟೆ ತಾಲೂಕಿನ ಜಂಬೂರಿನ ಫೀ.ಮಾ.ಕಾರ್ಯಪ್ಪ ಬಡಾವಣೆಯಲ್ಲಿ ನೆಲೆಸಿರುವ ಬಡಾವಣೆಗೂ ಭೇಟಿ ನೀಡಿದರು.
ಆದರೆ ಅಲ್ಲಿ ಯಾರೂ ನಿರೀಕ್ಷಿಸದ ಸ್ವಾಗತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದೊರಕಿತು.
2018ರಲ್ಲಿ ಮಹಾ ಮಳೆಯಿಂದ ಆಸ್ತಿಪಾಸ್ತಿ, ಮನೆಗಳನ್ನು ಕಳೆದುಕೊಂಡ ನಮಗೆ ಸರ್ಕಾರ ಮನೆ ನೀಡಿದೆ. ಅದರೆ ಇಲ್ಲಿ ಕುಡಿಯಲು ನೀರಿಲ್ಲ, ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಕೊಡದೆ ಜಿಲ್ಲಾಡಳಿತ ಹಾಗೂ ಸರಕಾರ ಏಕಾಏಕಿ ಈ ಮನೆಗಳಿಗೆ ಕಳುಹಿಸಿದೆ. ನಾವು ಇಲ್ಲಿಗೆ ಬಂದು ಇದ್ದ ನೆಮ್ಮದಿಯನ್ನೂ ಕಳೆದುಕೊಂಡಿದ್ದೇವೆ. ಹಳೆಯ ಸ್ಥಳಕ್ಕೆ ಹೋದರೆ, ಅಲ್ಲಿ ಮನೆ ಕೊಟ್ಟ ಮೇಲೆ ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಅಲ್ಲಿಂದಲೂ ಅಧಿಕಾರಿಗಳು ಓಡಿಸುತ್ತಾರೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ಯುಜಿಡಿ ಬ್ಲಾಕ್ ಆಗಿ ತಿಂಗಳುಗಳಾಗಿವೆ. ವಿದ್ಯುತ್ ಸರಿಯಾಗಿ ಪೂರೈಕೆಯಾಗಿಲ್ಲ. ಚರಂಡಿ ವ್ಯವಸ್ಥೆಗಳಿಲ್ಲ. ಪಂಚಾಯಿತಿಯವರಿಗೆ ಹೇಳಿದರೆ ಬೆದರಿಕೆ ಹಾಕುತ್ತಿದ್ದಾರೆ. ಹಲವಾರು ಬಾರಿ ಶಾಸಕರು, ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆ ಯಾರೂ ಬಗೆಹರಿಸುತ್ತಿಲ್ಲವೆಂದು ಸಚಿವರ ಮುಂದೆ ಬಡಾವಣೆಯ ನೂರಾರು ಜನರು ಆಕ್ರೋಶ ಹೊರಹಾಕಿದರು.
ಜನರು ಸಮಸ್ಯೆ ಹೇಳುತ್ತಲೇ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ ಬೋಸರಾಜು ಜನರು ಕೂಗಾಡುತ್ತಿದ್ದಂತೆ ವಾರ್ತಾ ಇಲಾಖೆಯ ವಾಹನವೇರಿ ಅಲ್ಲಿಂದ ಹೊರಟರು.ಈ ಸಂದರ್ಭ ಬಡಾವಣೆಯ ನಿವಾಸಿಗಳು ಮತ್ತಷ್ಟು ಆಕ್ರೋಶಗೊಂಡು ಸಚಿವರ ವಿರುದ್ಧ ಕಿಡಿಕಾರಿದರು.