ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಳಂದ ವಿಧಾನಸಭಾ ಕ್ಷೇತ್ರದ ಬಹುಚರ್ಚಿತ ಮತ ಕಳವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಬೆಂಗಳೂರು ನಗರದ ಎಪಿಎಂಎಂ ನ್ಯಾಯಾಲಯಕ್ಕೆ ಬೃಹತ್ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.
22,000 ಪುಟಗಳ ಈ ದೋಷಾರೋಪ ಪಟ್ಟಿಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಗುತ್ತೇದಾರ್ ಸೇರಿದಂತೆ ಒಟ್ಟು 7 ಜನರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ತಂದೆ-ಮಗ ಈ ಕೃತ್ಯದ ಪ್ರಮುಖ ಸೂತ್ರಧಾರರು ಎಂದು ಉಲ್ಲೇಖಿಸಲಾಗಿದೆ.
ಸುಮಾರು 5,994 ಮತಗಳನ್ನು ಅಕ್ರಮವಾಗಿ ಅಳಿಸಿ ಹಾಕಲು ಮತ್ತು ಕಳವು ಮಾಡಲು ಕಾಲ್ ಸೆಂಟರ್ ಅನ್ನು ಬಳಸಿಕೊಳ್ಳಲಾಗಿದೆ. ಮತಗಳ್ಳತನದ ಈ ಕೃತ್ಯಕ್ಕೆ ಮಾಜಿ ಶಾಸಕರೇ ಹಣವನ್ನು ಪಾವತಿ ಮಾಡಿದ್ದಾರೆ ಎಂಬ ಅಂಶವನ್ನು SIT ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.
ದಾಳಿ ವೇಳೆ ಸಂಗ್ರಹಿಸಲಾದ ಡಿಜಿಟಲ್ ಸಾಕ್ಷ್ಯಗಳಿಂದ ಈ ಅಪರಾಧ ಕೃತ್ಯ ಸಾಬೀತಾಗಿದೆ ಎಂದು SIT ತಿಳಿಸಿದೆ. ಹಾಲಿ ಶಾಸಕ ಬಿ.ಆರ್. ಪಾಟೀಲ್ ಅವರು ವೋಟ್ ಚೋರಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಿ.ಕೆ. ಸಿಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸುಭಾಷ್ ಗುತ್ತೇದಾರ್ ಮತ್ತು ಅವರ ಪುತ್ರ ಹರ್ಷಾನಂದ ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

