ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿ ಪಂಚೆ ಧರಿಸಿದ್ದಾರೆ ಎಂಬ ಕಾರಣದಿಂದ ಮಾಲ್ ಒಳಗೆ ಬಿಡದೆ ಕಾಯಿಸಿ ಹಾವೇರಿಯ ರೈತರನ್ನು ಅವಮಾನ ಮಾಡಿದ್ದು, ಇದರಿಂದ ಸಚಿವರುಗಳು ಗರಂ ಆಗಿದ್ದಾರೆ. ಈ ಬಗ್ಗೆ ಪೊಲೀಸ್ ನೋಟೀಸ್ ನೀಡುವ ಸೂಚನೆ ನೀಡಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಕುರಿತು ಗರಂ ಆಗಿದ್ದು, ʼಪಂಚೆ ಧರಿಸಿಕೊಂಡೇ ಏಳು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೆ. ಇದರಿಂದ ಅವರು ಪಾಠ ಕಲಿಯಬೇಕುʼ ಎಂದು ಟೀಕಿಸಿದ್ದಾರೆ. ʼಆ ಮಾಲ್ ನಡೆಸುತ್ತಿರುವವರಿಗೆ ಬುದ್ಧಿ ಕಡಿಮೆ ಇರಬೇಕು. ನಮ್ಮ ಇಲಾಖೆ ಇಲ್ಲವೇ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಪತ್ರ ಬರೆಯುತ್ತೇವೆʼ ಎಂದು ಅವರು ಹೇಳಿದ್ದಾರೆ.
ರೈತರಿಗೆ ಪ್ರವೇಶ ನಿರಾಕರಣೆ ಮಾಡಿದ ಜಿಟಿ ಮಾಲ್ ಕ್ರಮವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಖಂಡಿಸಿದ್ದು, ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ʼನಾವು ಇದನ್ನ ಖಂಡಿಸುತ್ತೇವೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‌ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‌ಗೆ ಹೋಗಬಹುದು ಅಂತ ನಮ್ಮ ಸರ್ಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರ್ಕಾರ ನಿಯಮ ತರಬೇಕುʼ ಎಂದು ಅವರು ಹೇಳಿದ್ದಾರೆ.
ಹಾವೇರಿ ಮೂಲದ ರೈತರನ್ನು ಪಂಚೆ ಉಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಮಾಲ್ ಒಳಗೆ ಬಿಡದೆ ಅವಮಾನ ಮಾಡಿದ ಜಿಟಿ ವರ್ಲ್ಡ್ ಮಾಲ್ ಮುಂದೆ ಇಂದು ರೈತ ಸಂಘಟನೆಗಳ ಹಾಗೂ ಕನ್ನಡ ಸಂಘಟನೆಗಳ ಸದಸ್ಯರು ಪಂಚೆ ಉಟ್ಟು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಸಾರ್ವಜನಿಕರ ಮುಂದೆ ಮಾಲ್ ಮಾಲಿಕರು ಕ್ಷಮೆ ಯಾಚಿಸಿದರು. ಮಾಲ್ ಆಡಳಿತದ ವರ್ತನೆಯ ಬಗ್ಗೆ ಸ್ಪಷ್ಟನೆ ಕೇಳಿ ನೋಟೀಸ್ ನೀಡಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.
ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ರೈತರ ಗೆಟಪ್‌ನಲ್ಲಿ ಬೆಳಗ್ಗೆ ಮಾಲ್ ಮುಂದೆ ಜಮಾಯಿಸಿದರು. ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಆ್ಯಂಡ್ ಟೀಂ ಪಂಚೆ ಧರಿಸಿ ಮಾಲ್ ಮುಂದೆ ಸೇರಿದ್ದು, ಪ್ರತಿಭಟನೆಗೆ ಮುಂದಾದರು. ಇಂದು ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಭದ್ರತಾ ಸಿಬ್ಬಂದಿ ವಜಾ
ಕೊನೆಗೆ ರೈತನಿಗೆ ಅವಮಾನ ಮಾಡಿದ ಜಿಟಿ ಮಾಲ್ ಇದೀಗ ರೈತನಿಗೆ ಕ್ಷಮೆಯಾಚಿಸಿ ಸನ್ಮಾನ ಮಾಡಿದೆ.ಹಾಗೂ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ.