ಹೊಸ ದಿಗಂತ ವರದಿ, ಮಂಡ್ಯ :
ಯಾವುದೇ ಶುಭ ಸಮಾರಂಭ ಮಾಡಿದರೂ ಅಕ್ಷತೆ ಕೊಟ್ಟು ಕರೆಯುವಂತೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ದೇಶದ ಎಲ್ಲ ಜನರಿಗೂ ಮಂತ್ರಾಕ್ಷತೆ ಕೊಟ್ಟು ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಸಾಕ್ಷಿಯಾಗುವಂತೆ ಕರೆದಿದೆ. ಇದರಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯ ಎಂದು ಪತ್ರಕರ್ತ ಡಿ.ಎನ್. ಶ್ರೀಪಾದು ತಿಳಿಸಿದರು.
ನಗರದ ಶ್ರೀ ವ್ಯಾಸರಾಜ ಮಠದ ಆವರಣದಲ್ಲಿ ನಡೆದ ಮಂಡ್ಯ ತಾಲೂಕಿನ ಎಲ್ಲ ಗ್ರಾಮಗಳಿಗೆ ಮಂತ್ರಾಕ್ಷತೆ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಟ್ಯಾಂತರ ರಾಮಭಕ್ತರ ಆಶಯದಂತೆ ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮಪ್ರಭುವಿನ ಮಂದಿರ ಲೋಕಾರ್ಪಣೆಯಾಗುತ್ತಿದೆ. ಅದನ್ನು ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳಬೇಕು ಎಂಬುದು ಎಲ್ಲರ ಆಶಯವೂ ಆಗಿದೆ ಎಂದರು.
ರಾಮಜನ್ಮಭೂಮಿಗಾಗಿ 72 ಯುದ್ಧಗಳು ನಡೆದಿವೆ. 32 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ವಿದೇಶಿಯರು ಆಕ್ರಮಣ ಮಾಡಿದರೂ ನಾವು ಸೋಲಲಿಲ್ಲ. ಸರಯೂ ನದಿಯಲ್ಲಿ ರಕ್ತದ ಕೋಡಿ ಹರಿಯಿತು. ಕರ ಸೇವಕರ ಪರಿಶ್ರಮದಿಂದಾಗಿ ಇಂದು ಭವ್ಯ ಮಂದಿರ ನಿರ್ಮಾಣವಾಗಿದೆ. ಶ್ರೀರಾಮ ಪ್ರಭುವನ್ನು ನೋಡಲು ಎಲ್ಲರೂ ಅಯೋಧ್ಯೆಗೆ ಬನ್ನಿ ಎಂದು ಮಂತ್ರಾಕ್ಷತೆ ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಮುಸ್ಲೀಂ ಅಧಿಕಾರಿಯೊಬ್ಬ ಉತ್ಕನನ ಮಾಡಿ ಇಲ್ಲಿ ರಾಮ ಮಂದಿರ ಇತ್ತು ಎಂದು ಪ್ರತಿಪಾದಿಸಿದ್ದಾನೆ. ರಾಮ ಮಂದಿರಕ್ಕಾಗಿ ಹೋರಾಟ ಮಾಡಿ ಉಳಿಸಿಕೊಳ್ಳಬೇಕಾದರೆ ಬೇಕಾದಷ್ಟು ಸಹಕಾರ ಮಾಡಿದ್ದಾರೆ. ಇಂದು ಭಾರತವೇ ಎದ್ದು ನಿಲ್ಲುತ್ತಿದೆ. ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ ಎಂದರು.
ಮೈಸೂರು ವಿಭಾಗದ ಪರ್ಯಾವರ್ಣ ಪ್ರಮುಖ್ ಪ್ರದೀಪ್‌ದೀಕ್ಷಿತ್, ಜಿಲ್ಲಾ ಸಂಪರ್ಕ ಪ್ರಮುಖ್ ದೊಡ್ಡಚಾರ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.