ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು ವ್ಯಕ್ತಿಯೊಬ್ಬ ಸ್ನೇಹಿತನಿಗೆ ಹಣಕೊಟ್ಟು ಆಕೆಯನ್ನು ಕೊಲ್ಲಿಸಿರುವ ಘಟನೆ ನಡೆದಿದೆ. ಹೇಮಂತ್ ಶರ್ಮಾ ಎಂಬಾತ ತನ್ನ ಸ್ನೇಹಿತನ ಸಹಾಯ ಪಡೆದು ಹತ್ಯೆ ಮಾಡಲು ಆತನಿಗೆ 2.5 ಲಕ್ಷ ರೂ. ನೀಡಿದ್ದ, ಆರಂಭದಲ್ಲಿ ಅಪಘಾತ ಎಂದು ಭಾವಿಸಲಾದ ಈ ಘಟನೆ ಆಗಸ್ಟ್ 13 ರಂದು ಸಂಭವಿಸಿದೆ. ಹತ್ತು ದಿನಗಳ ನಂತರ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗಿದೆ.
ಶರ್ಮಾ ತನ್ನ ಪತ್ನಿಯ ಕೊಲೆಯನ್ನು ಕಾರು ಅಪಘಾತದಂತೆ ಕಾಣುವಂತೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ದಿನ ಪತ್ನಿಯನ್ನು ಆಕೆಯ ಸಹೋದರ ಸಂದೇಶ್ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ವಾಪಸ್ ಬರುವಾಗ ಶರ್ಮಾ ಸ್ನೇಹಿತನಿದ್ದ ಇಕೋಸ್ಪೋರ್ಟ್ಸ್ ಕಾರು ಈ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಮಹಿಳೆ ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಸಂದೇಶ್ಗೆ ಗಾಯಗಳಾಗಿವೆ. ಶರ್ಮಾ ಇದನ್ನು ಹಿಟ್ ಆ್ಯಂಡ್ ರನ್ ಎಂದು ಹೇಳಿದ್ದ, ಬಳಿಕ ಆ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಶರ್ಮಾ ಹೇಳಿರುವ ರೀತಿಯ ವಾಹನ ಕಾಣಿಸದೇ ಇರುವುದು ಅನುಮಾನಗಳನ್ನು ಹುಟ್ಟುಹಾಕಿತ್ತು.