ಹೊಸದಿಗಂತ ವರದಿ ಹಾಸನ :
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುರಭಿ (24) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆಯಾಗಿದ್ದು, ಪತಿಯೇ ಕೊಲೆ ಮಾಡಿದ್ದಾನೆಂದು ಮೃತೆ ಪೋಷಕರ ಆರೋಪಿಸಿದ್ದಾರೆ. ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ಹುಣಸೂರಿನ ಸುರಭಿಯನ್ನು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣುಮಗುವಿದ್ದು, ಪತಿ ದರ್ಶನ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ನಿನ್ನೆ ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಸುರಭಿ ಪೋಷಕರಿಗೆ ಕರೆ ಮಾಡಿದ್ದಾನೆ. ನಂತರ ನಾಗಯ್ಯನಕೊಪ್ಪಲಿಗೆ ಬಂದ ಪೋಷಕರು ಸುರಭಿಯ ಲೋಬಿಸಿಯಿಂದ ಸತ್ತಿಲ್ಲ ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ. ಸುರಭಿ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ ಎಂದು ಸುರಭಿ ಪೋಷಕರ ಆರೋಪಿಸಿದ್ದಾರೆ.
ಸುರಭಿ ಸಾವಿಗೆ ಪತಿ ದರ್ಶನ್ ಕಾರಣವಾಗಿದ್ದು ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.