ದಿಗಂತ ವರದಿ ಬೆಳಗಾವಿ:
ಬೈಕ್ ಮೇಲೆ ತೆರಳುತ್ತಿದ್ದ ಯುವಕನನ್ನು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಮೂಡಲಗಿ ತಾಲೂಕಿನ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ನಡೆದಿದೆ.
ಮೌಲಾಸಾಬ ಮೊಮಿನ್(28) ಎಂಬಾತನೇ ಕೊಲೆಗೀಡಾಗಿದ್ದು, ಅಮೋಘ ಢವಳೇಶ್ವರ ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಕುರುಗೋಡ ಸಮೀಪದ ಲಕ್ಷ್ಮೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆರೋಪಿ ಪತ್ನಿ ಶಿಲ್ಪಾ ಹಾಗೂ ಮೌಲಾಸಾಬ ಬೈಕ್ ಮೇಲೆ ತೆರಳುತ್ತಿದ್ದಾಗ ಆರೋಪಿ ಅಮೋಘ ಮಚ್ಚಿನಿಂದ ಏಕಾಏಕಿ ಹಲ್ಲೆ ಮಾಡಿದ್ದರಿಂದ ಮೌಲಾಸಾಬ ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಗಾಯಗೊಂಡಿರುವ ಆರೋಪಿಯ ಪತ್ನಿ ಶಿಲ್ಪಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಲಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮ ಕೈಗೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.