ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆತನನ್ನೇ ಮದುವೆಯಾಗಬೇಕು ಎಂಬುದಾಗಿ ಯುವತಿ ಹಠ ಹಿಡಿದಿದ್ದು, ಕೊನೆಗೆ ಕೇರಳ ಹೈಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗೆ ಮದುವೆಯಾಗಲು 15 ದಿನಗಳು ಪರೋಲ್ ನೀಡಿ ಆದೇಶಿಸಿದೆ.
ಅಪರಾಧಿಗೆ ಜೈಲು ಶಿಕ್ಷೆಯಾಗುವ ಮೊದಲೇ ಮದುವೆ ನಿಶ್ಚಯವಾಗಿತ್ತು. ಜುಲೈ 13ರಂದೇ ಮದುವೆ ನಿಶ್ಚಯ ಆಗಿತ್ತು. ಹೀಗಾಗಿ ಅವಕಾಶ ಮಾಡಿಕೊಡುವಂತೆ ಕೋರಿ ಅಪರಾಧಿ ಪ್ರಶಾಂತ್ ತಾಯಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ ಕುನ್ನಿಕೃಷ್ಣನ್ ಜುಲೈ 12 ರಿಂದ 15 ದಿನಗಳ ಕಾಲ ಅಪರಾಧಿಗೆ ಪೆರೋಲ್ ಮಂಜೂರು ಮಾಡಿ ಆದೇಶಿಸಿದ್ದಾರೆ. ಪೆರೋಲ್ ಅವಧಿ ಮುಗಿದ ಬಳಿಕ, ಜುಲೈ 26ರ ಸಂಜೆ 4 ಗಂಟೆಯೊಳಗೆ ಜೈಲಿಗೆ ಹಿಂತಿರುಗಬೇಕು ಎಂದು ಆತನಿಗೆ ಸೂಚಿಸಿದ್ದಾರೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರವೂ ಅವಳ ಪ್ರೀತಿ ಹಾಗೆಯೇ ಇದೆ. ತನ್ನ ಸಂಗಾತಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದಾನೆ ಎಂದು ತಿಳಿದಿದ್ದರೂ ಆಕೆ ಮದುವೆಯಾಗಲು ಸಿದ್ಧವಾಗಿದ್ದಾಳೆ. ಆಕೆಯ ಧೈರ್ಯವನ್ನ ಕೋರ್ಟ್ ನಿರ್ಲಕ್ಷಿಸುವುದಿಲ್ಲ ಎಂದು ಪೀಠ ಹೇಳಿದೆ.
ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಅಪರಾಧಿಗೆ 15 ದಿನಗಳ ಅವಧಿಗೆ ಪೆರೋಲ್ ನೀಡಲಾಗಿದೆ. ಅಲ್ಲದೇ ಆ ಯುವತಿಯ ವೈವಾಹಿಕ ಜೀವನ ಸಂತೋಷವಾಗಿರಲಿ ಎಂದು ನ್ಯಾಯಾಲಯ ಹಾರೈಸಿದೆ.