ಹೊಸದಿಗಂತ ವರದಿ, ವಿಜಯನಗರ:
ಕಳೆದ 2021ರಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 3.80 ಲಕ್ಷ ರೂ.ಬೆಲೆ ಬಾಳುವ 76 ಗ್ರಾಂ.ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸಪೇಟೆ ನಗರದ ಮೇನ್ ಬಜಾರ್ ಪ್ರದೇಶದ ಚಿನ್ನಾಭರಣಗಳ ಅಂಗಡಿ ಎದುರು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಆರೋಪಿಗಳಾದ ಮಂಜುನಾಥ್ ಹಾಗೂ ಕಾರ್ತೀಕ್ ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಈ ಮನೆ ಕಳ್ಳತನ ಪ್ರಕರಣ ಬಯಲಾಗಿದೆ.
ಕಳೆದ 2021ರ ಡಿಸೆಂಬರ್ ತಿಂಗಳಲ್ಲಿ ನಗರದ ಕಂಚಗಾರ್ ಪೇಟೆಯಲ್ಲಿ ಮನೆಯೋಂದರಲ್ಲಿ ಕಳ್ಳತನ ಮಾಡಿರುವ ಕುರಿತು ಆರೋಪಿಗಳು ಬಹಿರಂಗ ಪಡಿಸಿದ್ದು, ಪ್ರಕರಣದ ತನಿಖೆ ನಡೆಸಿ ಆರೋಪಿತರಿಂದ 76 ಗ್ರಾಂ.ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಪಟ್ಟಣ ಠಾಣೆ ಪೋಲೀಸರು ಯಶಸ್ವಿಯಾಗಿದ್ದಾರೆ. ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ ಹಾಗೂ ಸಿಪಿಐ ಬಾಳನಗೌಡ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮುನಿರತ್ನಂ, ಎಎಸ್ಐ ಗಳಾದ ವೆಂಕಟೇಶ, ಸುರೇಶ್, ಸಿಬ್ಬಂದಿಗಳಾದ ಮಲಕಾಜಿ ಫಕೀರಪ್ಪ, ನಾಗೇಂದ್ರ, ರಾಘವೇಂದ್ರ, ಲಿಂಗರಾಜ್, ಪರುಶರಾಮ್ ನಾಯಕ್, ಶ್ರೀರಾಮ ರೆಡ್ಡಿ, ಕೊಟ್ರೇಶ್, ದುರ್ಗಿಬಾಯಿ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಶ್ರೀಹರಿಬಾಬು ಅವರು ಅಭಿನಂದಿಸಿದ್ದಾರೆ.