ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ಮುಗಿಯಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇಆಫ್ಗೆ ಅರ್ಹತೆ ಪಡೆದಿದ್ದು, ಅದರಲ್ಲಿ ಪಂಜಾಬ್ ಕಿಂಗ್ಸ್ ಕ್ವಾಲಿಫೈಯರ್ 1 ಆಡಲು ಸಜ್ಜಾಗಿದೆ. ಇಂದು ನಡೆಯಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವು ಆರ್‌ಸಿಬಿ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತದೆಯೇ ಅಥವಾ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಎದುರಿಸುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.
ಇದೀಗ ಈ ನಾಲ್ಕು ತಂಡಗಳಲ್ಲಿ ಯಾವೆರಡು ತಂಡಗಳು ಫೈನಲ್ಗೇರುತ್ತವೆ ಎಂದು ಕನ್ನಡಿಗ ರಾಬಿನ್ ಉತ್ತಪ್ಪ ಭವಿಷ್ಯ ನುಡಿದಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎರಡು ಫೈನಲ್ ತಂಡಗಳ ಬಗ್ಗೆ ಮಾತನಾಡಿದ್ದು, “ಐಪಿಎಲ್ 2025 ರ ಅಂತಿಮ ಪಂದ್ಯ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ ಎಂಬುದು ನನ್ನ ಅನಿಸಿಕೆ” ಎಂದು ಉತ್ತಪ್ಪ ಹೇಳಿದ್ದಾರೆ.
ಆರ್‌ಸಿಬಿ ಬಗ್ಗೆ ಉತ್ತಪ್ಪ ಮಾತನಾಡಿ, ‘ಜೋಶ್ ಹೇಜಲ್‌ವುಡ್ ಮರಳಿರುವುದು ನನಗೆ ತುಂಬಾ ಸಂತೋಷ ತಂದಿದೆ. ತಂಡದಲ್ಲಿ ಅವರ ಉಪಸ್ಥಿತಿಯು ಆರ್‌ಸಿಬಿಯನ್ನು ಬಲಪಡಿಸುತ್ತದೆ. ಆದರೆ ವಿರಾಟ್ ಕೊಹ್ಲಿ ಚೇಸ್ ಮಾಸ್ಟರ್ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಅವರು ಹಾಗೆ ಮಾಡಿದರೆ ಎದುರಾಳಿ ತಂಡ ಒತ್ತಡಕ್ಕೆ ಒಳಗಾಗುತ್ತದೆ” ಎಂದು ತಿಳಿಸಿದ್ದಾರೆ.