ಹೊಸ ದಿಗಂತ ವರದಿ , ಮಡಿಕೇರಿ:
ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದ ಹಿಂದಿರುವ ಷಡ್ಯಂತ್ರ ಬಯಲಾಗಬೇಕಿದ್ದು, ಇದರೊಂದಿಗೆ ಪ್ರತ್ಯೇಕತೆ ಮತ್ತು ಅಸಹಿಷ್ಣುತೆಯ ಮಾನಸಿಕತೆಯನ್ನು ಹತ್ತಿಕ್ಕುವ ಕೆಲಸವಾಗಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ನಗರದಲ್ಲಿ ಆಯೋಜನೆಗೊಂಡಿರುವ ಬಿಜೆಪಿ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭಾರತೀಯತೆ, ಹಿಂದೂ ಸಂಸ್ಕೃತಿಯ ಪ್ರತೀಕದಂತಿದ್ದ ಹರ್ಷನನ್ನು ಕಳೆದುಕೊಳ್ಳುವ ಮೂಲಕ ಓರ್ವ ನಿಷ್ಠಾವಂತ ಕಾರ್ಯಕರ್ತನನ್ನು ಹಿಂದೂ ಸಮಾಜ ಕಳೆದುಕೊಂಡಿದೆ. ಆತನ ಹತ್ಯೆಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ.ಆದರೂ ಕೆಲವರು ಬೆಂಗಳೂರಿನಿಂದ ಬಂದು ಆತನ ಚಲನವಲವನ್ನು ಗಮನಿಸಿ ಹತ್ಯೆ ಮಾಡಲಾಗಿದ್ದು, ಇದರ ಹಿಂದೆ ಯಾವುದೋ ಷಡ್ಯಂತ್ರ ಇದೆ. ಅದನ್ನು ಬಯಲಿಗೆಳೆಯುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಹರ್ಷನ ಹತ್ಯೆಗೆ ಅಸಹಿಷ್ಣುತೆ ಹಾಗೂ ಪ್ರತ್ಯೇಕತೆಯ ಮಾನಸಿಕತೆ ಕಾರಣವಾಗಿದ್ದು, ಈ ಮಾನಸಿಕತೆ ದೇಶದ ಶಾಂತಿ ಸುವ್ಯವಸ್ಥೆಯನ್ನು ಕದಡುವ ಮಾನಸಿಕತೆಯಾಗಿದೆ. ಇದರ ಹಿಂದೆ ಪಿಎಫ್ಐ, ಸಿಎಫ್ಐ ಸೇರಿದಂತೆ ಕೆಲವು ಸಂಘಟನೆಗಳು ಇರುವ ಮಾಹಿತಿಯಿದ್ದು, ಇಂತಹ ಮಾನಸಿಕತೆಯನ್ನು ಹತ್ತಿಕ್ಕುವ ಕೆಲಸವಾಗಬೇಕಿದೆ ಎಂದು ನುಡಿದರು.
ಇಂತಹ ಘಟನೆಗಳಲ್ಲಿ ಹಿಂದಿನ ಸರಕಾರದಂತೆ ವಿಳಂಬ ನೀತಿ ಅನುಸರಿಸದೆ, ಹತ್ಯೆ ನಡೆದ 24ಗಂಟೆಗಳಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸವನ್ನು ಸರಕಾರ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹರ್ಷನ ಕುಟುಂಬದ ಜೊತೆ ಹಿಂದೂ ಸಮಾಜವಿದೆ.ಕೇವಲ ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೆ, ಆತನ ತಾಯಿ ಹಾಗೂ ಸೋದರಿಯ ಆಶಯದಂತೆ ಪ್ರತ್ಯೇಕತೆಯ ಮಾನಸಿಕತೆಯನ್ನು ಮಟ್ಟ ಹಾಕುವ ಮೂಲಕ ಆತನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಗಣೇಶ್ ಕಾರ್ಣಿಕ್ ವಿಶ್ವಾಸ ವ್ಯಕ್ತಪಡಿಸಿದರು.