ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ಮುಕ್ತಾಯದ ಬೆನ್ನಲ್ಲೇ ಯುದ್ಧ ಕೊನೆಗಾಣಿಸುವ ಇಚ್ಛೆ ಇದೆ ಎಂದು ಪುಟಿನ್ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ.
ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ.
ಆದಾಗ್ಯೂ ಉಭಯ ನಾಯಕರೂ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧರಾಗಿದ್ದು, ಮಾತುಕತೆಯಲ್ಲಿ ಮಹತ್ವದ ಪ್ರಗತಿ ಕಂಡು ಬಂದಿದೆ ಎಂದು ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧ ಕೊನೆಗಾಣಿಸುವ ಇಚ್ಛೆ ಇದೆ ಎಂದು ಹೇಳಿದರು. ‘ಘರ್ಷಣೆಯಿಂದ ಸಂವಾದಕ್ಕೆ ಹೋಗಲು ನಾವು ಪರಿಸ್ಥಿತಿಯನ್ನು ಇನ್ನೂ ತಿಳಿಗೊಳಿಸಬೇಕಿದೆ ಎಂದು ಸೂಚ್ಯವಾಗಿ ಮತ್ತು ಅತ್ಯಂತ ಸಂಕ್ಷಿಪ್ತವಾಗಿ ಪುಟಿನ್ ಹೇಳಿದರು.
ಈ ಪರಿಸ್ಥಿತಿಗಳಲ್ಲಿ ಅದು ಎಷ್ಟೇ ವಿಚಿತ್ರವೆನಿಸಿದರೂ ನಾವು (ರಷ್ಯಾ ಮತ್ತು ಉಕ್ರೇನ್) ಒಂದೇ ಬೇರುಗಳನ್ನು ಹೊಂದಿದ್ದೇವೆ. ಇನ್ನು ಈಗ ನಡೆಯುತ್ತಿರುವ ಸಂಘರ್ಷ ಎಲ್ಲವೂ ನಮಗೆ ದುರಂತ ಮತ್ತು ಭಯಾನಕ ಗಾಯವಾಗಿದೆ. ಆದ್ದರಿಂದ ನಮ್ಮ ದೇಶವು ಅದನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದೆ ಎಂದು ಪುಟಿನ್ ಹೇಳಿದರು.