ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿರುವ ಬಗ್ಗೆ ಬಿಜೆಪಿ ಶಾಸಕ ಎನ್ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ. ಗಣಿಗಾರಿಕೆ (Mining) ಮಾಡಿದರೆ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ಮನೆ ಕಟ್ಟುವುದಕ್ಕೆ ಹಿಟಾಚಿ ಮೂಲಕ ಪಾಯ ತೆಗೆಯುತ್ತಿದ್ದೇನೆ. ಜಿಲೆಟಿನ್ ಸ್ಫೋಟಿಸಲು ಲೈಸೆನ್ಸ್ ಇದೆ, ಅದು ಗಣಿಗಾರಿಕೆ ಅಲ್ಲ. ಅದು ಖರೀದಿಸಿದ ಭೂಮಿ, ಸ್ವಂತ ಭೂಮಿ ಅಲ್ಲ ಎಂದರು.
ಇನ್ನು ಎಫ್ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್, ಸರ್ವೆ ನಂಬರ್ 10ರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿ ಕಲ್ಲು ಬಂಡೆ ಹೊರ ತೆಗೆಯುತ್ತಿದ್ದಾರೆ ಎಂಬ ದೂರಿನ ಅನ್ವಯ ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದರು.