ರಾಜಕೀಯ ಅಂದ್ರೆ ಇಷ್ಟೆ ಮೋಸ ಇದ್ದೇ ಇರುತ್ತೆ: ಸಚಿವ ಸ್ಥಾನ ವಂಚಿತ ಟಿಬಿ ಜಯಚಂದ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸಚಿವ ಸಂಪುಟ ರಚನೆಯಾಗಿದ್ದು, ಶನಿವಾರ 24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಬಾರಿ ಹಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದ್ದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಸಚಿವ ಸ್ಥಾನದಿಂದ ವಂಚಿತರಾಗಿದ್ದು, ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ವಿಧಿಯಾಟ. ರಾಜಕೀಯ ಅಂದ್ರೆ ಇಷ್ಟೆ ಮೋಸ ಇದ್ದೇ ಇರುತ್ತೆ. ನಾನು ಯಾವತ್ತೂ ಇದನ್ನು ಬಯಸಿದವನಲ್ಲ, ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಮಾಡಿದವನಲ್ಲ. ನೂರಕ್ಕೆ ನೂರರಷ್ಟು ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಬಯಸಿದ್ದೆ, ಅದರಲ್ಲಿ ಯಾವ ಅನುಮಾನವೂ ನನಗೆ ಇರಲಿಲ್ಲ, ಆದರೆ ಸಚಿವ ಸ್ಥಾನ ಕೈತಪ್ಪಿರುವುದು ಆಘಾತ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿಗೆ ಹೋಗಿ ಮನವರಿಕೆ ಮಾಡುತ್ತೇನೆ
ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನ್ನ ಕ್ಷೇತ್ರದ ಮತದಾರರು, ನನ್ನ ಹಿತೈಷಿಗಳು ನಿರಾಶರಾಗಿದ್ದಾರೆ. ನಾನು ದೆಹಲಿಗೆ ಹೋಗಿ ವರಿಷ್ಠರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ನನ್ನ ಜೊತೆ ಸಿದ್ದರಾಮಯ್ಯ ಅವರಾಗಲಿ ಅಥವಾ ಡಿಕೆ ಶಿವಕುಮಾರ್ ಆಗಲಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು. ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಕಾರಣ ಯಾರೂ ಕೊಟ್ಟಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!