February 19, 2026
Thursday, February 19, 2026
spot_img

ಎಐ ಅಂದ್ರೆ ಭಯ ಇಲ್ಲ, ಅದು ಭಾರತದ ಭವಿಷ್ಯ: AI Impact Summitನಲ್ಲಿ ಪ್ರಧಾನಿ ಮೋದಿ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೃತಕ ಬುದ್ಧಿಮತ್ತೆ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದರೆ, ಭಾರತ ಅದನ್ನು ಭವಿಷ್ಯದ ಶಕ್ತಿಯಾಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಎಐ ನಮಗೆ ಭಯವಲ್ಲ, ಅದು ನಮ್ಮ ಭಾಗ್ಯ” ಎಂದು ಹೇಳಿದ್ದಾರೆ. ಭಾರತೀಯ ಯುವ ಪ್ರತಿಭೆಯನ್ನು ವಿಶ್ವದ ಮುಂದೆ ತರುವಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತಿದೆ. ಮೂರು ಭಾರತೀಯ ಕಂಪನಿಗಳು ಹೊಸ ಎಐ ಮಾದರಿ ಆ್ಯಪ್‌ಗಳನ್ನು ಪರಿಚಯಿಸಿದ್ದು, ಇದು ದೇಶದ ನವೀನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು. ಕೆಲವು ರಾಷ್ಟ್ರಗಳು ಎಐ ಮೂಲಕ ಪ್ರಭುತ್ವ ಸಾಧಿಸಲು ಯತ್ನಿಸುತ್ತಿದ್ದರೆ, ಭಾರತ ಅದನ್ನು ಮಾನವ ಕೇಂದ್ರಿತ ಅಭಿವೃದ್ಧಿಯ ಸಾಧನವೆಂದು ಪರಿಗಣಿಸುತ್ತಿದೆ ಎಂದು ಹೇಳಿದರು.

ಯಂತ್ರ ಕಲಿಕೆ ವೇಗವಾಗಿ ವಿಸ್ತಾರವಾಗುತ್ತಿರುವ ಈ ಯುಗದಲ್ಲಿ, ತಂತ್ರಜ್ಞಾನವನ್ನು ಮಾನವ ಮೌಲ್ಯಗಳೊಂದಿಗೆ ಹೊಂದಿಸಿಕೊಳ್ಳುವುದು ಅಗತ್ಯವೆಂದು ಅವರು ಸೂಚಿಸಿದರು. ಭವಿಷ್ಯದ ಪೀಳಿಗೆಗೆ ಯಾವ ರೀತಿಯ ಎಐ ವ್ಯವಸ್ಥೆಯನ್ನು ನಾವು ಬಿಟ್ಟುಹೋಗುತ್ತೇವೆ ಎಂಬುದು ನಮ್ಮ ಹೊಣೆಗಾರಿಕೆ ಎಂದು ಒತ್ತಿಹೇಳಿದರು.

ಇದನ್ನೂ ಓದಿ:

ಎಐ ಒಂದು ಪರಿವರ್ತನಾ ಶಕ್ತಿ. ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಅದು ಪರಿಹಾರವಾಗಬಹುದು; ತಪ್ಪು ಮಾರ್ಗದಲ್ಲಿ ಬಳಸಿದರೆ ಅಡಚಣೆಯಾಗಿ ಪರಿಣಮಿಸಬಹುದು ಎಂದು ಎಚ್ಚರಿಸಿದರು. ಪರಮಾಣು ಶಕ್ತಿಯ ಉದಾಹರಣೆ ನೀಡಿ, ತಂತ್ರಜ್ಞಾನ ಸದಾ ದ್ವಿಮುಖ ಸ್ವಭಾವ ಹೊಂದಿರುತ್ತದೆ ಎಂದರು.

ಡಿಜಿಟಲ್ ಯುಗದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅತ್ಯಂತ ಮುಖ್ಯ ಎಂದು ಪ್ರಧಾನಿ ಹೇಳಿದರು. ಎಐ ನಿರ್ಮಿತ ವಿಷಯಗಳಿಗೆ ಸ್ಪಷ್ಟ ಗುರುತು ಅಥವಾ ವಾಟರ್‌ಮಾರ್ಕ್ ಇರಬೇಕು, ಇದರಿಂದ ನೈಜ ಮತ್ತು ಕೃತಕ ವಿಷಯವನ್ನು ಬೇರ್ಪಡಿಸಬಹುದು ಎಂದರು. ವಿಶ್ವಾಸಾರ್ಹತೆಯ ಲೇಬಲ್‌ಗಳ ಮೂಲಕ ಡಿಜಿಟಲ್ ಜಗತ್ತಿನಲ್ಲಿ ನಂಬಿಕೆ ಬೆಳೆಸುವುದು ಅಗತ್ಯ ಎಂದು ತಿಳಿಸಿದರು.

ಸಾಮಾನ್ಯ ಒಳಿತಿಗಾಗಿ ಜಾಗತಿಕ ಮಾನದಂಡಗಳನ್ನು ರೂಪಿಸುವುದು ಕಾಲದ ಅವಶ್ಯಕತೆ ಎಂದು ಅವರು ಕರೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !