March 23, 2026
Monday, March 23, 2026
spot_img

ಬಜೆಟ್‌ನಲ್ಲಿ ಹಣವಿಲ್ಲ, ಘೋಷಿಸಿದ ಅನುದಾನ ಬರುತ್ತಿಲ್ಲ: ಭದ್ರಾ ಮೇಲ್ದಂಡೆ ವಿಳಂಬಕ್ಕೆ ರೈತರ ಆಕ್ರೋಶ!

ಹೊಸದಿಗಂತ ಚಿತ್ರದುರ್ಗ:

ದಶಕಗಳು ಉರುಳಿದರೂ ಪೂರ್ಣಗೊಳ್ಳದ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಜಿಲ್ಲೆಯ ಸಮಗ್ರ ನೀರಾವರಿ ವ್ಯವಸ್ಥೆಗೆ ಆಗ್ರಹಿಸಿ, ಚಿತ್ರದುರ್ಗ ಜಿಲ್ಲೆಯ ರೈತರು ಬೃಹತ್ ಪಾದಯಾತ್ರೆಯ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ರೈತರು ಭಾಗವಹಿಸಿ ತಮ್ಮ ಆಕ್ರೋಶ ಹೊರಹಾಕಿದರು.

ನಗರದ ವೀರವನಿತೆ ಒನಕೆ ಓಬವ್ವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಪಾದಯಾತ್ರೆ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ರೈತ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾಗ ಘೋಷಿಸಿದ್ದ 5,300 ಕೋಟಿ ರೂ. ಅನುದಾನ ಈವರೆಗೂ ಬಿಡುಗಡೆಯಾಗಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕನಿಷ್ಠ 5,000 ಕೋಟಿ ರೂ.ಗಳನ್ನು ಮೀಸಲಿಡಬೇಕು ಮತ್ತು ಜಿಲ್ಲೆಯ ತೋಟಗಳಿಗೆ ಹನಿ ನೀರಾವರಿ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, “18 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಚುನಾವಣೆ ವೇಳೆ ಭರವಸೆ ನೀಡುವ ಸಂಸದರು ಮತ್ತು ಶಾಸಕರಿಗೆ ರೈತರ ಹಿತಾಸಕ್ತಿಗಿಂತ ರಾಜಕೀಯವೇ ಮುಖ್ಯವಾಗಿದೆ” ಎಂದು ಕಿಡಿಕಾರಿದರು. ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಅವರು, ಗುತ್ತಿಗೆದಾರರಿಗೆ ಸರ್ಕಾರ 1,850 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದನ್ನು ಪ್ರಸ್ತಾಪಿಸಿ, ಕೆಲಸ ಮಾಡದ ಶಾಸಕರು ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.

ಬೇಡಿಕೆಗಳು:

ಭದ್ರಾ ಮೇಲ್ದಂಡೆ ಯೋಜನೆಯ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಬೇಕು.

ಕೇಂದ್ರ ಸರ್ಕಾರ ಘೋಷಿಸಿರುವ ಅನುದಾನವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು.

ಜಿಲ್ಲೆಯ ರೈತರ ತೆಂಗು-ಅಡಿಕೆ ತೋಟಗಳನ್ನು ಉಳಿಸಲು ಹನಿ ನೀರಾವರಿ ಸೌಲಭ್ಯ ಒದಗಿಸಬೇಕು.

ಈ ಬೃಹತ್ ಪ್ರತಿಭಟನೆಯಲ್ಲಿ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಂದ್ರಪ್ಪ ತಾಳಿಕಟ್ಟೆ, ಮರ್ಲಹಳ್ಳಿ ರವಿಕುಮಾರ್ ಸೇರಿದಂತೆ ಹಲವು ಹಿರಿಯ ಹೋರಾಟಗಾರರು ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !