August 30, 2026
Sunday, August 30, 2026
spot_img

ಬೇರೆ ಮಾತುಕತೆ ಏನೂ ಇಲ್ಲ, ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಕೃಷ್ಣಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಷ್ಟು ವರ್ಷ ಪಕ್ಷಕ್ಕಾಗಿ ಕಷ್ಟಪಟ್ಟಿದ್ದೀನಿ, ನನಗೆ ಮಂತ್ರಿ ಸ್ಥಾನ ಬೇಕೇ ಬೇಕು, ಬೇರೆ ಚರ್ಚೆಗೆ ಇಲ್ಲಿ ಆಸ್ಪದ ಇಲ್ಲ ಎಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ ಕೃಷ್ಣಪ್ಪ ಪಟ್ಟು ಹಿಡಿದು ಕುಳಿತಿದ್ದಾರೆ.

ಸಚಿವ ಸ್ಥಾನ ತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರ ಮನವೊಲಿಸಲು ಸಿಎಂ ಡಿಕೆ ಶಿವಕುಮಾರ್‌, ಎಐಸಿಸಿ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಭೇಟಿ ನೀಡಿದ್ದರು. ಆದರೆ ಈ ಭೇಟಿ ಸಫಲವಾಗಿಲ್ಲ.

ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರವಾಗಿದೆ. ಈ ವಿಷಯಲ್ಲಿ ಯಾವುದೇ ಚರ್ಚೆ ಇಲ್ಲ. ನನಗೆ ಸಚಿವ ಸ್ಥಾನ ನೀಡಲೇಬೇಕು. ಇದನ್ನು ಬಿಟ್ಟು ಇನ್ಯಾವ ಮಾತುಕತೆಯನ್ನು ಕೇಳೋದಕ್ಕೆ ತಯಾರಿಲ್ಲ ಎಂದಿದ್ದಾರೆ.

ಹರಿಪ್ರಸಾದ್‌ ಮಾತನಾಡಿ, ಹಿರಿಯ ನಾಯಕರಿಗೆ ಸ್ಥಾನಮಾನ ಸಿಗದಿದ್ದಾಗ ಬೇಸರವಾಗುವುದು ಸಹಜ. ಅವರ ಬೆಂಬಲಿಗರಿಗೂ ನೋವಾಗಿದೆ. ಅವರಿಗೆ ಆಗಿರುವ ನೋವಿನ ಬಗ್ಗೆ ಈಗಾಗಲೇ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ. ಇನ್ನು ಕೆಲವು ದಿನಗಳಲ್ಲಿ ರಾಹುಲ್ ಗಾಂಧಿಯವರೇ ನೇರವಾಗಿ ಅವರೊಂದಿಗೆ ಮಾತನಾಡಿ ಸಮಾಧಾನಪಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದರು.

ಸಚಿವ ಸ್ಥಾನ ಸಿಗದಿದ್ದರೂ ಕೃಷ್ಣಪ್ಪ ಅವರು ಪಕ್ಷಕ್ಕೆ ಯಾವುದೇ ರೀತಿಯ ಧಕ್ಕೆ ಅಥವಾ ತೊಂದರೆಯಾಗದಂತೆ ನಡೆದುಕೊಂಡಿದ್ದಾರೆ, ಇದು ಬಹಳ ಸಂತೋಷದ ವಿಷಯ. ಅವರಿಗೆ ಯಾವ ಜವಾಬ್ದಾರಿ ಅಥವಾ ಸ್ಥಾನಮಾನ ನೀಡಬೇಕು ಎಂಬುದನ್ನು ರಾಹುಲ್ ಗಾಂಧಿ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !