ಹೊಸದಿಗಂತ ವರದಿ ಬಾಗಲಕೋಟೆ:
ರಾಜ್ಯದಲ್ಲಿ ಅಗ್ಗದ ಸರಾಯಿ ಜಾರಿಗೆ ತರುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಹೊಸ ಮದ್ಯದ ಅಂಗಡಿಗಳಿಗೆ ತೆರೆಯುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿಯಿಂದ ಆದಾಯ ಹೆಚ್ಚಿಗೆ ಬರುವ ನಿರೀಕ್ಷೆ ಇಟ್ಟುಕೊಳ್ಳೋಣ ಎಂದರು.
ಇಲಾಖೆಯ ಆಡಳಿತದಲ್ಲಿ ಬದಲಾವಣೆ ತರುತ್ತೇವೆ. ಲೀಕೇಜ್ ಕಂಟ್ರೋಲ್ ಮಾಡುತ್ತೇವೆ. ವಿಶೇಷವಾಗಿ ಡ್ರಗ್ಸ್, ಗಾಂಜಾ ಕಂಟ್ರೋಲ್ ಮಾಡುತ್ತೇವೆ. ಯಾವುದೇ ಯೋಜನೆ ತಂದ್ರು ಹಣಕಾಸು ಹೊಂದಿಸಲು ಅಬಕಾರಿ ಕಡೆಗೆ ನೋಡ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಎಸ್ಟಿಯಿಂದ ಬಂದ ಬಳಿಕ ಆದಾಯ ಸಂಗ್ರಹಕ್ಕೆ ಎರಡು, ಮೂರು ಇಲಾಖೆ ಬಿಟ್ಟರೆ ಬೇರೆ ಇಲ್ಲ. ಅದು ಅನಿವಾರ್ಯವಾಗಿ ನಿಮ್ಮ ಕಣ್ಣಿಗೆ ನಮ್ಮ ಖಾತೆಯೇ ಕಾಣುತ್ತೆ. ಅದು ಸಹಜವೂ ಇದೆ. ರಾಜಸ್ವ ಹೆಚ್ಚಿಗೆ ಮಾಡಲು ಲಿಕೇಜ್ ಕಂಟ್ರೋಲ್ ಮಾಡುತ್ತೇವೆ ಎಂದರು.
ಎಲ್ಲ ಹೊರೆಯನ್ನು ಮದ್ಯಪ್ರಿಯರ ಮೇಲೆ ಹೊರೆಸುತ್ತೀರಾ ಎನ್ನುವ ಪ್ರಶ್ನೆಗೆ ನೋ… ನೋ… ಹಂಗೆ ಆಗಲ್ಲ. ಮದ್ಯದ ಬೆಲೆ ಹೆಚ್ಚಿಸುವ ಬಗ್ಗೆ ಮದ್ಯ ಪ್ರಿಯರು ಬೇಸರ ಆಗ್ತಾರೆ ಅಂತ ನನಗಂತೂ ಯಾರೂ ಬಂದು ಹೇಳಿಲ್ಲ. ನಿಮಗೆ ಯಾರಾದ್ರೂ ಹೇಳಿದ್ರೆ ಆ ಬಗ್ಗೆ ನಾನು ಮಾತಾಡ್ತೇನೆ ಎಂದರು.