ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ: ಚಲವಾದಿ ನಾರಾಯಣಸ್ವಾಮಿ ಕಿಡಿ

ಹೊಸದಿಗಂತ ವರದಿ, ಚಿತ್ರದುರ್ಗ :

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಸರ್ಕಾರ ಇದೆಯೋ ಇಲ್ಲವೋ ಎಂಬಂತಾಗಿದೆ. ಜನತೆಯ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರ ನೋವಿಗೆ ಕಿವಿಗೂಡುತ್ತಿಲ್ಲ. ತನ್ನದೇ ಆದ ರೀತಿಯಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಮುಖ್ಯಮಂತ್ರಿಗಳಾದವರಿಗೆ ಬಡವರ ಕಷ್ಟ ಗೊತ್ತಿಲ್ಲ. ಅವರ ಸಮಸ್ಯೆಗಳಿಗೆ ಏನು ಪರಿಹಾರ ಕೈಗೊಂಡಿಲ್ಲ ಎಂದು ದೂರಿದರು.

ಈ ಸರ್ಕಾರಕ್ಕೆ ಮಾನ, ಮಾರ್ಯದೆ ಇಲ್ಲ. ಸರ್ಕಾರ ಜನರಿಗೆ ಒಳ್ಳೆಯದನ್ನು ಮಾಡಲು ಬಂದಿಲ್ಲ. ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಇದರಿಂದ ಕರ್ನಾಟಕ ಸರ್ಕಾರವನ್ನು ಎಟಿಎಂ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಹಣವನ್ನು ಬೇರೆ ರಾಜ್ಯಗಳ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಳು ಮಾಡುತ್ತಾರೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿತ್ತು. ಈಗ ಅದರಂತೆ ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ. ಸುಲಿಗೆ ಮಾಡುತ್ತಿದ್ದಾರೆ. ಗ್ಯಾರೆಂಟಿ ಯೋಜನೆ ಹೆಸರಲ್ಲಿ ಮೂಗಿಗೆ ತುಪ್ಪ ಸವರಿದ್ದಾರೆ ಎಂದರು.

ಮನೆಯಲ್ಲಿದ್ದ ಮಹಿಳೆಯನ್ನು ವಿವಸ್ತ್ರಗೂಳಿಸುವುದರ ಮೂಲಕ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿದೆ. ಇಲ್ಲಿ ಸರ್ಕಾರವೂ ಬದುಕಿಲ್ಲ, ಮಂತ್ರಿಯೂ ಸಹ ಬದುಕಿಲ್ಲ. ಕಾನೂನು ಸತ್ತು ಹೋಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹೆಣ್ಣು ಭ್ರೂಣ ಹತ್ಯೆಯಲ್ಲಿ ಸಣ್ಣ ಪ್ರಕರಣವೆಂಬಂತೆ ದಾಖಲು ಮಾಡಿ, ಅವರಿಗೆ ಬೇಲು ಸಿಗುವಂತೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಾಲು ಸಹ ಇದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಭೂಮಿಗೆ ಹಾಕಿದ ಕಾಳು ಮಳೆ ಇಲ್ಲದೆ ಬೆಳೆ ಬರುತ್ತಿಲ್ಲ. ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ದರಿದ್ರವನ್ನು ಹೊತ್ತು ತಂದಿದೆ. ಸಿ.ಎಂ. ಅವರು ಸುಳ್ಳು ಹೇಳುವ ಮೂಲಕ ಮತದಾರರನ್ನು ಮೋಸ ಮಾಡುತ್ತಿದ್ದಾರೆ. ದಲಿತರ ಉದ್ದಾರಕ್ಕಾಗಿ ಇಟ್ಟಿದ್ದ ಹಣವನ್ನು ಸರ್ಕಾರ ಬೇರೆ ರೀತಿಯಲ್ಲಿ ಉಪಯೋಗ ಮಾಡಿಕೊಂಡಿದ್ದಾರೆ. ದಲಿತರ ಹಣವನ್ನು ಬೇರೆ ಉದ್ದೇಶಕ್ಕೆ ಉಪಯೋಗ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ದಲಿತರ ಹಣವನ್ನು ಸರ್ಕಾರ ನುಂಗಿದರೂ ಕೂಡ ದಲಿತ ಸಂಘಟನೆಗಳು ಸುಮ್ಮನೆ ಇವೆ. ದಲಿತ ಶಾಸಕರು, ಮಂತ್ರಿಗಳೂ ಸಹ ಸಮ್ಮನಿದ್ದಾರೆ. ಈ ಬಗ್ಗೆ ಹೋರಾಟ ಮಾಡಬೇಕಿದೆ. ಸಣ್ಣ ಪುಟ್ಟದಕ್ಕೆಲ್ಲಾ ಹೋರಾಟ ಮಾಡುವ ಸಂಘಟನೆಗಳು ಇದರ ಬಗ್ಗೆ ಮೌನವಹಿಸಿವೆ. ಸರ್ಕಾರ ತನ್ನ ಗ್ಯಾರೆಂಟಿಗಳಿಗಾಗಿ ದಲಿತರ ಹಣವನ್ನು ತೆಗೆದುಕೊಂಡಿದೆ. ಇದರ ವಿರುದ್ದ ಹೋರಾಟ್ನ ಮಾಡಲಾಗುವುದೆಂದು ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುತ್ತಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸ ಮಾಡಬೇಕು. ನಂತರ ಕೇಂದ್ರದತ್ತ ನೋಡಬೇಕು. ಆದರೆ ಇದೆಲ್ಲದಕ್ಕಿಂತ ಮುಂಚೆಯೇ ಕೇಂದ್ರ ನಮಗೆ ಏನು ಸಹಾಯ ಮಾಡಿಲ್ಲ ಎಂದು ದೂರುವುದು ಸರಿಯಲ್ಲ. ರಾಜ್ಯದಲ್ಲಿ ಮಹೀಲೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇವರಿಗೆ ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದ್ದರೂ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು, ಕೊಲೆಗಳಾಗಿವೆ. ಈ ಬಗ್ಗೆ ಗೃಹ ಸಚಿವರನ್ನು ಪ್ರಶ್ನೆ ಮಾಡಿದಾಗ ಉಡಾಫೆ ಉತ್ತರ ನೀಡುತ್ತಾರೆ. ಬೆಳಗಾವಿ ಘಟನೆ ಎಲ್ಲರನ್ನು ತಲೆ ತಗ್ಗಿಸುವಂತೆ ಮಾಡಿದೆ. ಇದರ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಅವರು ಸಹ ಈ ಬಗ್ಗೆ ಹೇಳಿಕೆ ನೀಡಿಲ್ಲ. ಸಮಾಜದಲ್ಲಿ ಅನೇಲ ಶೋಷಣೆಗಳು ನಡೆಯತ್ತಿವೆ. ಇದರ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಜ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ನರೇಂದ್ರ, ನವೀನ್ ಚಾಲುಕ್ಯ, ಮಾಧುರಿ ಗಿರೀಶ್, ಕೆ.ಮಲ್ಲಿಕಾರ್ಜನ್, ವೆಂಕಟೇಶ್, ಯಾದವ್, ನಾಗರಾಜು, ಬೇದ್ರೆ, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಭಾರ್ಗವಿ ದ್ರಾವಿಡ್, ಶಾಂತಮ್ಮ, ರಜನಿ, ಕಾಂಚನ, ಬಸಮ್ಮ, ನಾಗರಾಜ್, ಕಿರಣ್, ಯಶವಂತ, ಪರಶುರಾಮ್, ರಾಮದಾಸ್ ,ತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!