ಕನ್ನಡ ನೆಲ-ಜಲ-ಭಾಷೆ-ಸಂಸ್ಕೃತಿ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ,ವಿಜಯನಗರ (ಹಂಪಿ):

ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ವಿಚಾರದಲ್ಲಿ ರಾಜೀ ಎನ್ನುವ ಪ್ರಶ್ನೆಯೇ ಇಲ್ಲ. ವಿಜಯನಗರ ಅರಸರ ಕಾಲದ ವೈಭವ ಮತ್ತು ಅಭಿವೃದ್ಧಿ ರಾಜ್ಯದಲ್ಲಿ ಮರಳಿಸುವುದು ನಮ್ಮ ಆಧ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ವಿಶ್ವಪ್ರಸಿದ್ಧ ಹಂಪಿಯಲ್ಲಿ ಆಯೋಜಿಸಿದ್ದ “ಕರ್ನಾಟಕ ಸಂಭ್ರಮ- 50” ರ ಹಿನ್ನೆಲೆ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಸವಣ್ಣನ ನಾಡು ಇದು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರು ಕಲ್ಯಾಣ ಕಾಣಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಉದ್ದೇಶದಿಂದಲೇ 371 (ಜೆ) ಜಾರಿ ಮಾಡಿದೆವು. ಮಲ್ಲಿಕಾರ್ಜುನ ಖರ್ಗೆಯವರೂ ಸೇರಿ ಹಲವರ ಹೋರಾಟದ ಫಲವಾಗಿ 371 ಜೆ ಜಾರಿಯಾಗಿದೆ. ಇದು ಜಾರಿಯಾದ ಹಿನ್ನೆಲೆ ಈ ಭಾಗಕ್ಕೆ ಹೆಚ್ಚೆಚ್ಚು ಅನುದಾನ ಅವಕಾಶಗಳು ಸೃಷ್ಟಿಯಾಗಿವೆ. ನಾನು ಮುಖ್ಯಮಂತ್ರಿ ಆದ ಬಳಿಕ ಬಾಕಿ ಇದ್ದ ಅನುದಾನದ ಜತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ 3 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದೇವೆ ಎಂದರು.

ನನಗೆ ಮೌಢ್ಯದಲ್ಲಿ ನಂಬಿಕೆ ಇಲ್ಲ. ಬಸವಣ್ಣನವರೂ ಸೇರಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಕೂಡ ಮೌಢ್ಯವನ್ನು ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ, ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆಯಿದೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರ ಪ್ರಾಣ ತ್ಯಾಗವನ್ನೂ ಪಡೆದು ವಿಶಾಲ ಕನ್ನಡ ನಾಡು ಉದಯವಾಗಿದೆ. ಕರ್ನಾಟಕ ನಾಮಕರಣಗೊಂಡು 50 ನೇ ವರ್ಷಕ್ಕೆ ಬಿಜೆಪಿ ಇಡೀ ವರ್ಷ ಕನ್ನಡ ಸಂಭ್ರಮವನ್ನು ಆಚರಿಸಬೇಕಿತ್ತು. ಅವರು ಆಚರಿಸಲಿಲ್ಲ. ಆದರೆ, ನಮ್ಮ ಸರ್ಕಾರ ಬಂದ ತಕ್ಷಣ ಮೊದಲ ಬಜೆಟ್ ನಲ್ಲೇ “ಕನ್ನಡ ಸಂಭ್ರಮ-50” ನ್ನು ಘೋಷಿಸಿದೆ. ನಾವು ಕರ್ತವ್ಯಲೋಪ ಮಾಡಲಿಲ್ಲ ಎಂದರು.

ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿ ಆಗಲು ರಾಜ್ಯಾದ್ಯಂತ ಸುತ್ತಾಡಿದೆ. ಎಲ್ಲಾ ಕಚೇರಿಗಳಿಗೆ ಕನ್ನಡ ಟೈಪಿಂಗ್ ಯಂತ್ರವನ್ನು ನೀಡಿ ಐಎಎಸ್ ಅಧಿಕಾರಿಗಳೂ ಕೂಡ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲು ಪ್ರೇರಣೆ ನೀಡಿದ್ದೆ ಎಂದು ಸ್ಮರಿಸಿದರು.
ಇತರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿರಿ. ಆದರೆ, ಕನ್ನಡದಲ್ಲೇ ವ್ಯವಹರಿಸಿರಿ ಎಂದು ಕರೆ ನೀಡಿ ಕನ್ನಡ ಜ್ಯೋತಿಯನ್ನು ರಾಜ್ಯಾದ್ಯಂತ ಸಂಭ್ರಮದಿಂದ ಸ್ವಾಗತಿಸಿ ಎಂದು ಕರೆ ನೀಡಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗೌರವ ಉಪಸ್ಥಿತಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯ ಶಾಸಕರಾದ ಈ.ತುಕಾರಾಂ, ಡಾ.ಎನ್.ಟಿ.ಶ್ರೀನಿವಾಸ್, ಜಿ.ಎನ್.ಗಣೇಶ್, ಲತಾ, ಮಂಜುನಾಥ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ ಸೇರಿ ಇಲಾಖಾ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಲಾವಿಧ ಸಾಧುಕೋಕಿಲಾ ಅವರ ಕಾರ್ಯಕ್ರಮ ಗಮನಸೆಳೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!