ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂಬ ಸಂದೇಶದಿಂದ ಗೊಂದಲ ಸೃಷ್ಟಿಯಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದು, “ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದ್ದಾರೆ. ಶನಿವಾರದಂದು ನೀಡಿದ್ದ ಕೆಲವು ಹೇಳಿಕೆಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
“ರಸ್ತೆ ಬೇಕೆಂದರೆ ಗ್ಯಾರಂಟಿ ಯೋಜನೆ ಬಂದ್ ಮಾಡಬೇಕಾಗುತ್ತದೆ” ಎಂಬ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮಾತನಾಡುವ ರೀತಿ ಅನುಸರಿಸಿ, ಮುಂದಿನ ವರ್ಷ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಕೇವಲ ಉಲ್ಲೇಖಿಸಿದ್ದೇನೆ ಎಂದರು. ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತವಾಗಿಲ್ಲ, ಇನ್ನಷ್ಟು ಅಭಿವೃದ್ಧಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಈ ಮೂಲಕ ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಧಕ್ಕೆಯಾಗಲಿಲ್ಲವೆಂಬ ಭರವಸೆ ನೀಡಿದ ರಾಯರೆಡ್ಡಿ, ಸರ್ಕಾರದ ಭದ್ರತೆ ಮತ್ತು ದೃಢತೆಯನ್ನು ಪುನರುಚ್ಚರಿಸಿದರು.