ಹೊಸದಿಗಂತ ವರದಿ ನಾಗಮಂಗಲ :
ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ 3.6ಲಕ್ಷ ರು. ಮೌಲ್ಯದ 45ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಸರಗಳ್ಳರು ಪರಾರಿಯಾಗಿರುವ ಘಟನೆ ತಾಲೂಕಿನ ಅರೆಹಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಗ್ರಾಮದ ತಿಮ್ಮೇಗೌಡರ ಪತ್ನಿ ನಿಂಗಮ್ಮ ಎಂಬುವರ ಕುತ್ತಿಗೆಯಲ್ಲಿದ್ದ ತಾಳಿ ಸಹಿತ 45ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಸ್ಕೂಟಿಯಲ್ಲಿ ಬಂದ ಇಬ್ಬರು ಸರಗಳ್ಳರು ಕಿತ್ತೊಯ್ದಿದ್ದಾರೆ.
ಬುಧವಾರ ಬೆಳಿಗ್ಗೆ ಎಂದಿನಂತೆ ಮಂಕರಿಯಲ್ಲಿ ತುಂಬಿದ್ದ ಜಾನುವಾರುಗಳ ಕಸವನ್ನು ತಲೆಯ ಮೇಲೆ ಹೊತ್ತಿದ್ದ ನಿಂಗಮ್ಮ ಮನೆಯಿಂದ ಅಂಚೆಭೂವನಹಳ್ಳಿ ರಸ್ತೆಯಲ್ಲಿರುವ ದನದ ಕೊಟ್ಟಿಗೆಗೆ ರಸ್ತೆಬದಿಯಲ್ಲಿ ಹೋಗುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಸ್ಕೂಟಿಯಲ್ಲಿ ಬರುತ್ತಿದ್ದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬಾತ ಸ್ಕೂಟಿಯಿಂದ ಕೆಳಗಿಳಿದು ನಿಂಗಮ್ಮ ಅವರ ಕುತ್ತಿಗೆಗೆ ಕೈಹಾಕಿ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ನಿಂಗಮ್ಮ ಅವರ ಚೀರಾಟ ಕೇಳಿ ದೌಡಾಯಿಸಿಬಂದ ಸ್ಥಳೀಯರು ಆಸುಪಾಸಿನ ಭಾಗಗಳಲ್ಲಿ ಹುಡುಕಾಟ ನಡೆಸಿದರೂ ಕೂಡ ಸರಗಳ್ಳರು ಪತ್ತೆಯಾಗಲಿಲ್ಲ. ನಂತರ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಪರಿಶೀಲನೆ ನಡೆಸಿದರು. ನಿಂಗಮ್ಮ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸರಗಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.