ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಹಲವೆಡೆ ಮಳೆಯಾಗುತ್ತಿದ್ದರೂ, ಬಿಸಿಲ ಝಳ ಮಾತ್ರ ಕಡಿಮೆ ಆಗುತ್ತಿಲ್ಲ. ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ಹೆಚ್ಚಿನ ಭಾಗಗಳು ಈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಕಾಣಲಿವೆ. ಆದಾಗ್ಯೂ, ಗುಡುಗು ಸಹಿತ ಮಳೆ ಸುರಿಯಲಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ತಾಪ ಇರಲಿದೆ ಎಂದು ಹೇಳಿದೆ.
ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಹೆಚ್ಚಿನ ಭಾಗಗಳಲ್ಲಿ ಶಾಖದಲೆ ಇರಲಿದೆ. ದಿನಗಳ ಸಂಖ್ಯೆ ಸಾಮಾನ್ಯಕ್ಕಿಂತ ಒಂದರಿಂದ ನಾಲ್ಕು ದಿನಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಗುಜರಾತ್, ಒಡಿಶಾ, ಛತ್ತೀಸ್‌ಗಢ, ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದ ಉತ್ತರ ಭಾಗದ ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ದಿನಗಳನ್ನು ಕಾಣುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ನೈಋತ್ಯ ಪರ್ಯಾಯ ದ್ವೀಪವನ್ನು ಹೊರತುಪಡಿಸಿ ದೇಶದ ವಿವಿಧ ಭಾಗಗಳು ಮೇ ತಿಂಗಳಲ್ಲಿ ಒಂದರಿಂದ ಮೂರು ದಿನಗಳ ಕಾಲ ಶಾಖದ ಅಲೆಯನ್ನು ಅನುಭವಿಸುತ್ತವೆ.
ವಾಯುವ್ಯ, ಮಧ್ಯ ಮತ್ತು ಈಶಾನ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.