ಹೊಸದಿಗಂತ ವರದಿ, ಶಿವಮೊಗ್ಗ:
ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಯಿಲ್ಲ. ಬಜೆಟ್ ಮಂಡನೆಗೆ ರೊಕ್ಕವೇ ಇಲ್ಲ ಎಂದು ಎಂದು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಲೋಕಸಭಾ ಸಮರದವರೆಗೆ ಗ್ಯಾರೆಂಟಿ ನಡೆಯಲಿದೆ. ಚುನಾವಣೆ ನಂತರ ಗ್ಯಾರಂಟಿಗೆ ವಾರೆಂಟಿ ಇಲ್ಲ. ಈ ಸರ್ಕಾರದ ಬಗ್ಗೆನೂ ಗ್ಯಾರಂಟಿಯಿಲ್ಲ ಎಂದು ಲೇವಡಿ ಮಾಡಿದರು.
ತಮಗೆ ರಾಜ್ಯ ಬಿಜೆಪಿಯಲ್ಲಿ ತಮಗೆ ಸ್ಥಾನಮಾನ ಸಿಗದೆ ಇರುವ ಬಗ್ಗೆ ಯತ್ನಾಳ್ ಹೀಗೆ ಪ್ರತಿಕ್ರಿಯಿಸಿ, ನಾನೊಬ್ಬ ಸ್ವತಂತ್ರ ಹಕ್ಕಿ. ಯಾವುದೇ ಹುದ್ದೆಯನ್ನು ನಾನು ಬಯಸಿಲ್ಲ. ತಾರತಮ್ಯವೇ ಸೃಷ್ಠಿ ನಿಯಮವೆಂದು ಭಾವಿಸಿದ್ದೇನೆ. ಮಹಾಭಾರತದಲ್ಲಿ ಅಪ್ರತಿಮ ವೀರ ಕರ್ಣ ಇದ್ದ. ಆತನನ್ನ ಗುರುತಿಸಿರಲಿಲ್ಲ. ಹಾಗೇ ಅಪ್ರತಿಮ ಬಿಲ್ಲುವಿದ್ಯೆ ಕಲಿತ ಏಕಲವ್ಯ ಇದ್ದರೂ ಅರ್ಜುನನಿಗೆ ಅಪ್ರತಿಮ ಎಂದು ಬಿಂಬಿಸಲಾಯಿತು. ಅದೇ ರೀತಿ ಈಗಿನ ರಾಜಕೀಯ ಕೂಡಾ ಎಂದು ಮಾರ್ಮಿಕವಾಗಿ ನುಡಿದರು.