ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ಮನೆಮಾತಾದ ನಟಿ ವೈಷ್ಣವಿ ಗೌಡ, ‘ಸನ್ನಿಧಿ’ ಎಂಬ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದವರು. ಬಳಿಕ ಸೀತಾರಾಮ ಧಾರವಾಹಿಯ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದ ನಟಿ, ಇತ್ತೀಚೆಗಷ್ಟೇ ಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ ಮದುವೆಯ ಬಳಿಕ ತಾಳಿ ಹಾಕಿಲ್ಲವೆಂದು ಹಲವಾರು ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಸ್ವತಃ ವೈಷ್ಣವಿ, ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸ್ಪಷ್ಟನೆ ನೀನೀಡಿದ್ದಾರೆ.
“ತುಂಬಾ ಜನ ಕೇಳ್ತಿದ್ರು… ತಾಳಿ ಹಾಕಿಲ್ಲ ಅಂದ್ರೆ ಮದುವೆ ಆಗಿಲ್ಲವಂತೆ. ಮದುವೆ ಅನ್ನೋದು ಇಬ್ಬರ ಕುಟುಂಬಗಳ ವಿಷಯ. ಹುಡುಗನ ಮನೆ ಸಂಪ್ರದಾಯವೇ ಮುಖ್ಯ. ಅವರ ತಾಯಿಯೂ ಇವತ್ತಿಗೂ ತಾಳಿ ಹಾಕಿಲ್ಲ. ಅವರಲ್ಲಿ ತಾಳಿ ಹಾಕೋ ಸಂಪ್ರದಾಯವೇ ಇಲ್ಲ” ಎಂದು ವೈಷ್ಣವಿ ತಿಳಿಸಿದರು.
“ಮದುವೆಯಾಗಿರೋ ಹುಡುಗಿ ಅಂದ್ರೆ ಚಿನ್ನದ ಮುಗುತ್ತಿ, ಕೈಯಲ್ಲಿ ಬಳೆ, ಕಾಲಿಗೆ ಗೆಜ್ಜೆ, ಹಾಗೂ ಕಾಲುಂಗುರ ಇಟ್ರೆ ಸಾಕು ಅಂತ ಅವರ ಸಂಪ್ರದಾಯದಲ್ಲಿದೆ, ಅದನ್ನ ನಾನೂ ಪಾಲಿಸುತ್ತಿದ್ದೇನೆ. ನಾನು ಶಾಸ್ತ್ರಗಳನ್ನು ಗೌರವಿಸುತ್ತೇನೆ” ಎಂದರು.