ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ (Air India) ವಿಮಾನ ಯಾನ ಸಂಸ್ಥೆ ವಿರುದ್ಧ ಬಿಜೆಪಿ ನಾಯಕಿ, ಚಿತ್ರ ನಟಿ ಖುಷ್ಬು ಸುಂದರ್ ಕಿಡಿಕಾರಿದ್ದಾರೆ.
ಏರ್ ಇಂಡಿಯಾದ್ದು ಅತ್ಯಂತ ಕಳಪೆ ಮಟ್ಟದ ಸೇವೆ, ಅವರ ಬಳಿ ಒಂದು ವ್ಹೀಲ್ ಚೇರ್ (ಗಾಲಿ ಕುರ್ಚಿ) ಕೂಡ ಇಲ್ಲ ಎಂದು ಟ್ವಿಟರ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.
‘ನನಗೆ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಅಲ್ಲಿ ಪಟ್ಟಿಕಟ್ಟಲಾಗಿದೆ. ನಡೆದಾಡಲು ಸಾಧ್ಯವಿಲ್ಲ. ಚೆನ್ನೈ ಏರ್ಪೋರ್ಟ್ನಲ್ಲಿ ನನಗೆ ಕೆಟ್ಟ ಅನುಭವ ಆಯಿತು. ಏರ್ ಇಂಡಿಯಾದವರು ನನಗೆ ಒಂದು ವ್ಹೀಲ್ ಚೇರ್ ಒದಗಿಸಲು 30 ನಿಮಿಷ ಕಾಯಿಸಿದರು. ಆಮೇಲೆ ಕೂಡ ಇನ್ನೊಂದು ವಿಮಾನಯಾನ ಸಂಸ್ಥೆಯಿಂದ ಎರವಲು ಪಡೆದು ನನಗೆ ನೀಡಿದರು ಹೊರತು ಅವರ ಪ್ರಯಾಣಿಕರಿಗಾಗಿ, ಅವರದ್ದೇ ಒಂದು ವ್ಹೀಲ್ಚೇರ್ನ್ನು ಇಟ್ಟುಕೊಂಡಿಲ್ಲ. ಏರ್ ಇಂಡಿಯಾ ಇಂಥ ವಿಷಯದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ಒದಗಿಸಬೇಕು’ ಎಂದು ಹೇಳಿದ್ದಾರೆ.
ಖುಷ್ಬು ಟ್ವೀಟ್ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ‘ಮೇಡಂ, ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ನಾವು ಈ ಬಗ್ಗೆ ಚೆನ್ನೈ ಏರ್ಪೋರ್ಟ್ ಸಿಬ್ಬಂದಿಯನ್ನು ವಿಚಾರಿಸುತ್ತೇವೆ ಮತ್ತು ನಿಮಗಾದ ಅನನುಕೂಲತೆಗೆ ವಿಷಾದಿಸುತ್ತೇವೆ’ ಎಂದು ಹೇಳಿದೆ.