ಭದ್ರತಾ ವಿಚಾರದಲ್ಲಿ ಸ್ಪೈವೇರ್ ಬಳಕೆ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಯೋತ್ಪಾದಕರ ವಿರುದ್ಧ ಸ್ಪೈವೇರ್’ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ , ದೇಶದ ಭದ್ರತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಯಾವುದೇ ಘಟನೆಗಳನ್ನು ಬಹಿರಂಗ ಮಾಡಬಾರದು ಎಂದು ಹೇಳಿದೆ.

ಕೋರ್ಟ್ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಿ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಮೇಲೆ ಗುರಿಯಿಟ್ಟು ಕಣ್ಗಾವಲು ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ 2021 ರಲ್ಲಿ ಸಲ್ಲಿಸಲಾದ ಹಲವಾರು ರಿಟ್ ಅರ್ಜಿಗಳ ವಿಚಾರಣೆಯನ್ನು ನಡೆಸಿತು.

ಈ ವೇಳೆ ಗೌಪ್ಯತೆ ಉಲ್ಲಂಘನೆಯ ವೈಯಕ್ತಿಕ ಆತಂಕಗಳನ್ನು ಪರಿಹರಿಸಬಹುದು ಆದರೆ ತಾಂತ್ರಿಕ ಸಮಿತಿಯ ವರದಿಯು ಬೀದಿಯಲ್ಲಿ ಚರ್ಚಿಸುವಂತಹ ಯಾವುದೇ ದಾಖಲೆ ಅಲ್ಲ ಎಂದು ಹೇಳಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ದಿನೇಶ್ ದ್ವಿವೇದಿ, ಪ್ರಕರಣದಲ್ಲಿನ ಮೂಲ ಸಮಸ್ಯೆ ಏನೆಂದರೆ ಸರ್ಕಾರದ ಬಳಿ ಈ ಸ್ಪೈವೇರ್ ಇದೆಯೋ? ಅವರು ಖರೀದಿಸಿದ್ದಾರೋ ಅಥವಾ ಇಲ್ಲವೋ ಎನ್ನುವುದು. ಸರ್ಕಾರದ ಬಳಿ ಇದ್ದರೆ ಅದನ್ನು ಈಗಲೂ ಅದನ್ನು ನಿರಂತರವಾಗಿ ಬಳಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು.

ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸೂರ್ಯ ಕಾಂತ್, ದೇಶವು ಸ್ಪೈವೇರ್ ಬಳಸುತ್ತಿದ್ದರೆ ತಪ್ಪು ಏನಿದೆ? ಸ್ಪೈವೇರ್ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಯಾರ ವಿರುದ್ಧ ಬಳಸಲಾಗಿದೆ ಎಂಬುದು ಪ್ರಶ್ನೆ. ನಾವು ರಾಷ್ಟ್ರದ ಭದ್ರತೆಯನ್ನು ರಾಜಿ ಮಾಡಿಕೊಳ್ಳಲು ಅಥವಾ ತ್ಯಾಗ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ಪೈವೇರ್ ಬಳಸಿಕೊಂಡು ತನ್ನನ್ನು ಬೇಹುಗಾರಿಕೆ ಮಾಡಲಾಗಿದೆ ಎಂದು ಅನುಮಾನಿಸುವ ಯಾರಾದರೂ ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ಅವರನ್ನು ಗುರಿಯಾಗಿಸಲಾಗಿದೆಯೇ ಎಂಬುದರ ಕುರಿತು ಪ್ರತಿಕ್ರಿಯೆಯನ್ನು ಪಡೆಯಲಾಗುವುದು ಎಂದು ನ್ಯಾಯಾಲಯ ಹೇಳಿತು.

ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಯೋತ್ಪಾದಕರು ಗೌಪ್ಯತೆಯ ಹಕ್ಕುಗಳನ್ನು ಹೊಂದಲು ಸಾಧ್ಯವಿಲ್ಲ. ಗೌಪ್ಯತೆಯ ಹಕ್ಕನ್ನು ಹೊಂದಿರುವ ನಾಗರಿಕ ವ್ಯಕ್ತಿಯನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸಲಾಗುತ್ತದೆ ಎಂದು ತಿಳಿಸಿದರು.

ಪತ್ರಕರ್ತರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಪೆಗಾಸಸ್ ಮಾಲ್‌ವೇರ್ ಬಳಸಿ ಎನ್‌ಎಸ್‌ಒ ವಾಟ್ಸಾಪ್ ಅನ್ನು ಹ್ಯಾಕ್ ಮಾಡಿದೆ ಎಂದು ಅಮೆರಿಕ ಜಿಲ್ಲಾ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದೆ. ಹ್ಯಾಕ್ ಆಗಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ ಎಂದು ಜಡ್ಜ್‌ ಗಮನಕ್ಕೆ ತಂದರು.

ಪೆಗಾಸಸ್ ವಿರುದ್ಧ ವಾಟ್ಸಾಪ್ ಸಲ್ಲಿಸಿದ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯವು ನೀಡಿದ ತೀರ್ಪನ್ನು ದಾಖಲಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟ ಕೋರ್ಟ್‌ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!