Monday, December 1, 2025

ಬೆಂಗಳೂರಿನಲ್ಲಿ ನಟೋರಿಯಸ್ ಟ್ರಾಫಿಕ್ ಇದೆ… ಸಂಚಾರಿ ಪೊಲೀಸರು ಕೇರ್ ಲೆಸ್: ಸಂಸದ ಆಕ್ರೋಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಸಂಸದ ರಾಜೀವ್ ರೈ ಅವರು, ಬೆಂಗಳೂರಿನ ಸಂಚಾರ ನಿರ್ವಹಣೆ ಮತ್ತು ಸಂಚಾರ ಪೊಲೀಸರ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಟೋರಿಯಸ್ ಟ್ರಾಫಿಕ್ ಇದೆ, ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಎಂದು ಸಮಾಜವಾದಿ ಪಕ್ಷದ ಎಂಪಿ ರಾಜೀವ್ ರೈ ಬೆಂಗಳೂರು ಟ್ರಾಫಿಕ್ ವಿರುದ್ಧ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ.

ಭಾನುವಾರ ಏರ್‌ಪೋರ್ಟ್‌ಗೆ ತೆರಳಬೇಕಾಗಿದ್ದ ರಾಜೀವ್, ರಾಜ್ ಸಮಾಧಿ ರಸ್ತೆಯ ಬಳಿ ಒಂದು ಗಂಟೆಗಳ ಕಾಲ ಜಾಮ್‌ನಲ್ಲಿ ತಗ್ಲಾಕ್ಕೊಂಡಿದ್ದರು. ಹೀಗಾಗಿ ವಿಮಾನ ಮಿಸ್ ಆಗುವ ಆತಂಕದಲ್ಲಿ ಇದ್ದರು. ಇದರಿಂದ ಸಿಟ್ಟಿಗೆದ್ದ ರಾಜೀವ್ ರೈ ಸಿಎಂ ಅನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಹರಿಹಾಯ್ದಿದ್ದಾರೆ.

ಸಂಸದ ರಾಜೀವ್ ರೈ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮುಖ್ಯಮಂತ್ರಿ (@CMofKarnataka), ಬೆಂಗಳೂರು ಪೊಲೀಸ್ ಕಮಿಷನರ್ (@CPBlr) ಮತ್ತು ಜಂಟಿ ಸಂಚಾರ ಆಯುಕ್ತರನ್ನು (@Jointcptraffic) ಟ್ಯಾಗ್ ಮಾಡಿ, ಸಂಚಾರ ದಟ್ಟಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳೇ ಹೀಗೆ ಹೇಳುವುದಕ್ಕೆ ಕ್ಷಮಿಸಿ, ಆದರೆ ನಿಮ್ಮಲ್ಲಿ ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆ ಮತ್ತು ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕ ಸಂಚಾರ ಪೊಲೀಸರು ಇದ್ದಾರೆ’ ಎಂದು ಖಾರವಾಗಿ ಬರೆದಿದ್ದಾರೆ.

ಟ್ರಾಫಿಕ್ ಕ್ಲಿಯರೆನ್ಸ್‌ಗೆ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿದ್ರೆ ಕರೆಯನ್ನು ಸ್ವೀಕರಿಸಿಲ್ಲ ಸುತ್ತಾಮುತ್ತ ಒಬ್ರೂ ಟ್ರಾಫಿಕ್ ಪೊಲೀಸರು ಕೂಡ ಇರಲಿಲ್ಲ. ಚಂದದ ಸಿಟಿಯ ಹೆಸರು ಹಾಳು ಮಾಡಲು ಇಂತಹ ಅಧಿಕಾರಿಗಳು ಸಾಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!