ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ರಾಜಧಾನಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮೂರು ವಂದೇ ಭಾರತ್ ರೈಲುಗಳಿಗೆ ಹಾಗೂ ಹಳದಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು. ಜೊತೆಗೆ, ಮೆಟ್ರೋ 3ನೇ ಹಂತದ ಕಾಮಗಾರಿಗೆ ಅಡಿಪಾಯ ಹಾಕಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಎಂದಿನಂತೆ ಕನ್ನಡದಲ್ಲಿಯೇ ಮಾತು ಆರಂಭಿಸಿ, “ಎಲ್ಲರಿಗೂ ನಮಸ್ಕಾರ” ಎಂದು ಆತ್ಮೀಯವಾಗಿ ಸ್ವಾಗತಿಸಿದರು. ಕರ್ನಾಟಕದ ಭೂಮಿ ಮೇಲೆ ಕಾಲಿಡುವಾಗ ಸದಾ ನಮ್ಮತನದ ಅನುಭವ ಉಂಟಾಗುತ್ತದೆ. ಇಲ್ಲಿ ಜನರ ಪ್ರೀತಿ, ಸಂಸ್ಕೃತಿ ಮತ್ತು ಕನ್ನಡ ಭಾಷೆಯ ಸಿಹಿತನ ನನಗೆ ತುಂಬಾ ಇಷ್ಟ” ಎಂದು ಹೇಳಿದರು.
ಬೆಂಗಳೂರು ನಗರವನ್ನು ಪ್ರಶಂಸಿಸಿದ ಪ್ರಧಾನಿ, ಇದು ಹೊಸ ಭಾರತದ ಬೆಳವಣಿಗೆಯ ಸಂಕೇತ. ಜಾಗತಿಕ ಐಟಿ ನಕ್ಷೆಯಲ್ಲಿ ಭಾರತದ ಬಾವುಟ ಹಾರಿಸಿದ ಮಹಾನಗರ. ಇದೇ ಬೆಂಗಳೂರಿನ ಜನರ ಪ್ರತಿಭೆ, ಶ್ರಮ ಮತ್ತು ದೃಢನಿಶ್ಚಯದಿಂದ ಸಾಧ್ಯವಾಗಿದೆ ಎಂದರು. ಭವಿಷ್ಯಕ್ಕಾಗಿ ನಗರವನ್ನು ಇನ್ನಷ್ಟು ಸಿದ್ಧಪಡಿಸಲು ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ನೀಡಲಾಗುತ್ತಿದೆ ಎಂದರು.
ಮೋದಿಯವರು, ಇತ್ತೀಚಿನ ಆಪರೇಷನ್ ಸಿಂದೂರವನ್ನು ಉಲ್ಲೇಖಿಸಿ, “ಇದರ ಯಶಸ್ಸಿನ ಹಿನ್ನಲೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಿದೆ. ಈ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬೆಂಗಳೂರಿನ ಯುವಕರ ಪಾತ್ರ ಶ್ಲಾಘನೀಯ” ಎಂದರು. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ತನ್ನ ಶಕ್ತಿ ತೋರಿಸಿದೆ ಎಂದು ಹೇಳಿದರು.
ಮೆಟ್ರೋ ಅಭಿವೃದ್ಧಿಗೆ ಕಾರ್ಪೋರೇಟ್ ಸಹಕಾರ
ಮೆಟ್ರೋ ಯೋಜನೆಗಳು ನಗರಗಳನ್ನು ಸ್ಮಾರ್ಟ್ ಆಗಿಸುತ್ತಿವೆ, ಸಾರ್ವಜನಿಕ ಸಾರಿಗೆಗೆ ಹೊಸ ಆಯಾಮ ನೀಡುತ್ತಿವೆ ಎಂದು ಮೋದಿ ಹೇಳಿದರು. ಮೆಟ್ರೋ ಕಾಮಗಾರಿಗೆ ಸಹಕಾರ ನೀಡಿದ ಇನ್ಫೋಸಿಸ್ ಸೇರಿದಂತೆ ಅನೇಕ ಕಾರ್ಪೋರೇಟ್ ಕಂಪನಿಗಳಿಗೆ ಪ್ರಧಾನಿಯವರು ಧನ್ಯವಾದ ಸಲ್ಲಿಸಿದರು.
ಡಿಜಿಟಲ್ ತಂತ್ರಜ್ಞಾನಕ್ಕೆ ಕೇಂದ್ರದ ಆದ್ಯತೆ
ಮೇಕ್ ಇನ್ ಇಂಡಿಯಾ, ವಿಕಸಿತ ಭಾರತ ಮತ್ತು ಡಿಜಿಟಲ್ ಇಂಡಿಯಾ ಕುರಿತು ಪ್ರಧಾನಿಗಳು ವಿವರಿಸಿದರು. “ಇಂದು ದೇಶದ ಪ್ರತಿಯೊಂದು ಗ್ರಾಮಕ್ಕೂ ಡಿಜಿಟಲ್ ಸೇವೆಗಳು ತಲುಪುತ್ತಿವೆ. ವಿಶ್ವದ ಶೇಕಡಾ 50ರಷ್ಟು ಯುಪಿಐ ವ್ಯವಹಾರ ಭಾರತದಲ್ಲಿಯೇ ನಡೆಯುತ್ತಿದೆ. ತಂತ್ರಜ್ಞಾನದಿಂದ ಸರ್ಕಾರ ಮತ್ತು ಜನರ ನಡುವಿನ ಅಂತರ ಕಡಿಮೆಯಾಗಿದೆ” ಎಂದು ಹೇಳಿದರು.
ಬೆಂಗಳೂರು ಡಿಜಿಟಲೀಕರಣದ ವೇಗದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ ಎಂದು ಮೋದಿ ಶ್ಲಾಘಿಸಿದರು. ತಂತ್ರಜ್ಞಾನವನ್ನು ಪ್ರತಿ ವಲಯದಲ್ಲಿ ಬಳಸಿ, ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದ ಎಲ್ಲಾ ಪ್ರಯತ್ನಗಳು ನೆರವಾಗಲಿವೆ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿಯವರ ಈ ಭೇಟಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಪ್ರಗತಿಗೆ ನೀಡಿದ ಆದ್ಯತೆಯನ್ನು ತೋರಿಸಿತು. ವಂದೇ ಭಾರತ್ ರೈಲು ಮತ್ತು ಹೊಸ ಮೆಟ್ರೋ ಮಾರ್ಗಗಳು ನಗರ ಸಾರಿಗೆಗೆ ವೇಗ ಮತ್ತು ಅನುಕೂಲತೆ ತರಲಿದ್ದು, ಬೆಂಗಳೂರಿನ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುವ ನಿರೀಕ್ಷೆ ಇದೆ.