ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ದೋಷರಹಿತ ವ್ಯವಸ್ಥೆಗಳ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ.
ಅಧಿವೇಶನಕ್ಕೆ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳು ಯಾವುದೇ ಲೋಪ-ದೋಷಗಳಾಗದಂತೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಅಧಿವೇಶನದ ಸಮಯದಲ್ಲಿ ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು, ಜೊತೆಗೆ ತ್ವರಿತ ಪರಿಹಾರವನ್ನು ಕಂಡುಕೊಳ್ಳಬೇಕು. ಕಂಪ್ಯೂಟರ್‌ಗಳು ಮತ್ತು ಇತರ ಅಗತ್ಯ ಮೂಲಸೌಕರ್ಯಗಳಿಗೆ ಸರಿಯಾದ ವ್ಯವಸ್ಥೆಗಳೊಂದಿಗೆ ನೆಟ್‌ವರ್ಕ್ ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕು.
ಸುವರ್ಣ ವಿಧಾನಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಬೇಕು . ಗೊಂದಲವನ್ನು ತಪ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಪಾಸ್ ವಿತರಣೆಯನ್ನು ಸುಗಮವಾಗಿ ನಿರ್ವಹಿಸಬೇಕು ಎಂದು ಒತ್ತಿ ಹೇಳಿದರು.

