ಹೊಸದಿಗಂತ ವರದಿ, ದಾವಣಗೆರೆ
2008ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮೂವರು ಶಾಸಕರ ಕೊರತೆ ಇದ್ದ ಸಂದರ್ಭದಲ್ಲಿ ಇಬ್ಬರು ಪಕ್ಷೇತರರನ್ನು ಬಿಜೆಪಿ ಕರೆತರುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಂಸದ ಸಿದ್ದೇಶಣ್ಣ ಕಾರಣ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಸಿದ್ದೇಶಣ್ಣ ಇಂತಹದ್ದೊಂದು ಕೆಲಸ ಮಾಡದಿದ್ದರೆ ಬಿಜೆಪಿ ಸರ್ಕಾರವೇ ಬರುತ್ತಿರಲಿಲ್ಲ. ನಾವು ಮಂತ್ರಿಗಳೂ ಆಗುತ್ತಿರಲಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಸಿದ್ದೇಶಣ್ಣನ ದೊಡ್ಡ ಪರಿಶ್ರಮ ಇದೆ. ದಾವಣಗೆರೆ ಕ್ಷೇತ್ರದಿಂದ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಅಕ್ಕನವರು ಗೆಲ್ಲಬೇಕು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವ ನಿಟ್ಟಿನಲ್ಲಿ ನಮ್ಮ ಜವಾಬ್ಧಾರಿ ಅರಿತು ಕೆಲಸ ಮಾಡಬೇಕು ಎಂದರು.
ಟಿಕೆಟ್ ಘೋಷಣೆ ನಂತರ ಬಹುತೇಕ ಎಲ್ಲಾ ಕಡೆ ವಿರೋಧ, ಗೊಂದಲ ಸಹಜ. ಆದರೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ. ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲು ಹೊರಟಿದ್ದೇವೆ. ಇನ್ನೊಂದು ವಾರ ಕಳೆದ ನಂತರ ಎಲ್ಲವೂ ಸುಧಾರಣೆಯಾಗಲಿದೆ. ಯಾರೂ ಸಹ ಬಂಡಾಯ ನಿಲ್ಲುವ ಪರಿಸ್ಥಿತಿ ಇಲ್ಲ. ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಹಿರಿಯರಾದ ಎಸ್.ಎ.ರವೀಂದ್ರನಾಥ್ ಜೊತೆಗೂ ಚರ್ಚಿಸುತ್ತೇನೆ. ಕಳೆದ ವಿಧಾನಸಭೆ ಚುನಾವಣೆ ನಂತರ ಗೊಂದಲದಿಂದಾಗಿ ಹೀಗೆಲ್ಲಾ ಆಗಿದೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯರಾದ ಕೆ.ಎಸ್.ಈಶ್ವರಪ್ಪ ಉಪ ಮುಖ್ಯಮಂತ್ರಿ ಆಗಿದ್ದವರು. ಪಕ್ಷಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದವರು. ಮಗನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಮಾತನಾಡಿರಬಹುದು. ಎಲ್ಲವೂ ಸರಿಯಾಗಲಿದೆ. ನಮ್ಮ ಕೇಂದ್ರ ನಾಯಕರು ಈಗಾಗಲೇ ಈಶ್ವರಪ್ಪಗೆ ಸಂಪರ್ಕ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಯಾವುದೇ ತೊಂದರೆ ಆಗುವುದಿಲ್ಲ. ಎಲ್ಲವೂ ಸರಿಯಾಗುತ್ತದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜೊತೆಗೆ ನಮ್ಮ ನಾಯಕರು ಮಾತನಾಡಿದ್ದಾರೆ. ಬೆಳಗಾವಿ ಕ್ಷೇತ್ರದಿಂದಲೇ ಶೆಟ್ಟರ್ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಅವರು ನುಡಿದರು.
ಬೆಂಗಳೂರಿನ ಅರಮನೆ ಮೈದಾನದ ವಿವಾದದ ಪ್ರಕರಣಕ್ಕೆ ಮರು ಜೀವನ ನೀಡಲು ಹೊರಟಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣಕ್ಕೆ ಮಂದಾಗಿದೆ.
ಅಧಿಕಾರ ಇವತ್ತು ಇರುತ್ತದೆ. ನಾಳೆ ಹೋಗುತ್ತದೆ. ಯಾರೂ ಸಹ ಶಾಶ್ವತವಲ್ಲ. ಮೈಸೂರು ಮಹಾರಾಜರ ಮೇಲೆ ಇಂತಹ ದ್ವೇಷದ ರಾಜಕಾರಣ ಮಾಡಬಾರದು. ಕಾಂಗ್ರೆಸ್ ಸಚಿವ ಸಂಪುಟದಲ್ಲಿರುವವರೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿಲ್ಲ. ಕಾಂಗ್ರೆಸ್ಸಿನ ಸಚಿವರ ಪೈಕಿ ಯಾರೊಬ್ಬರೂ ಸ್ಪರ್ಧೆಗೆ ಉತ್ಸಾಹ ತೋರಿಸುತ್ತಿಲ್ಲ. ಹಾಗಾಗಿ ಬಿಜೆಪಿಯವರ ಹಿಂದೆ ಬಿದ್ದು ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಇಂತಹ ಗತಿಗೆಟ್ಟ ಪಕ್ಷವಾಗಿ ಕಾಂಗ್ರೆಸ್ ಈಗ ಮಾರ್ಪಟ್ಟಿದೆ ಎಂದು ಅವರು ವ್ಯಂಗ್ಯವಾಡಿದರು.