ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ತನಕ ವಿರಮಿಸಲ್ಲ: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ,ಚಿತ್ರದುರ್ಗ

ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬರಲಿದೆ. ಅಲ್ಲಿಯವರೆಗೆ ನಾನು ಯಾವುದೇ ಜಿಲ್ಲೆಗೆ ಹೋದಲ್ಲಿ ಹಾರ ತುರಾಯಿ ಸ್ವೀಕರಿಸುವುದಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿಯುವತನಕ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ನಗರದ ಹೊರ ವಲಯದ ಮಾಳಪನಹಟ್ಟಿ ಬಳಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಸೆ.೨ ರಂದು ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸದಸ್ಯತ್ವ ಅಭಿಯಾನ ಪರಿಶೀಲನೆ ನಡೆಸುತ್ತಿದ್ದೇನೆ. ಆ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದರು.

ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಅಧ್ಯಕ್ಷರು ಸೇರಿದಂತೆ ಎಲ್ಲರೂ ಶಕ್ತಿ ಕೇಂದ್ರಗಳಲ್ಲಿ ಸಂಚರಿಸಿ ಪಕ್ಷದ ಸದಸ್ಯತ್ವ ಅಭಿಯಾನ ಮಾಡಬೇಕು. ಆ ಮೂಲಕ ಅತಿಹೆಚ್ಚು ಸದಸ್ಯತ್ವ ನೊಂದಣಿ ಮಾಡುವ ಸಂಕಲ್ಪ ಮಾಡಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಹಾಗಾಗಿ ಎಲ್ಲರೂ ಜವಾಬ್ಧಾರಿಯಿಂದ ಕೆಲಸ ಮಾಡಬೇಕು. ಅತಿಹೆಚ್ಚು ಮಹಿಳೆಯರು, ಯುವಕರು, ವಕೀಲರು, ಡಾಕ್ಟರ್, ಇಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಜನರನ್ನು ಸಂಪರ್ಕಿಸಿ ಸದಸ್ಯತ್ವ ಮಾಡಿಸಬೇಕೆಂದು ಸಲಹೆ ಮಾಡಿದರು.

ಮಂಡಲ ಅಧ್ಯಕ್ಷರು, ಬೂತ್ ಅಧ್ಯಕ್ಷರು ಅಲ್ಲದೇ ನಾಲ್ಕೈದು ಮಂದಿ ಕಾರ್ಯಕರ್ತರನ್ನು ನೇಮಕ ಮಾಡಿ ಒಂದು ಗುಂಪು ರಚಿಸಿ. ಈ ಗುಂಪಿನಿಂದ ಪ್ರತಿ ಮನೆ ಮನೆಗೆ ಭೇಟಿ ಮಾಡಿ ಸದಸ್ಯತ್ವ ನೊಂದಣಿ ಮಾಡುವ ಕೆಲಸವಾಗಬೇಕು. ಕೇವಲ ಮಿಸ್‌ಕಾಲ್ ಕೊಟ್ಟರೆ ಸಾಲದು. ಮೊಬೈಲ್‌ನಲ್ಲಿ ಬರುವ ಲಿಂಕ್ ಓಪನ್ ಮಾಡಬೇಕು. ಅದರಲ್ಲಿ ಕೇಳುವಂತೆ ಹೆಸರು, ವಿಳಾಸ ಮತ್ತಿತರ ವಿವರಗಳನ್ನು ಭರ್ತಿ ಮಾಡಬೇಕು. ಆ ಮೂಲಕ ಸದಸ್ಯತ್ವ ನೊಂದಣಿ ಮಾಡಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.ನವೀನ್, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ರಾಜ್ಯ ಕಾರ್ಯದರ್ಶಿಗಳಾದ ತಮ್ಮೇಶ್‌ಗೌಡ, ಶರಣ್ ತಳ್ಳಿಕೆರೆ, ಯುವ ಮುಖಂಡರಾದ ಅನಿತ್‌ಕುಮಾರ್, ಕೆ.ಟಿ.ಕುಮಾರಸ್ವಾಮಿ, ಸೌಭಾಗ್ಯ ಬಸವರಾಜನ್, ಸಂಪತ್‌ಕುಮಾರ್, ಜಿ.ಟಿ.ಸುರೇಶ್, ಮಲ್ಲಿಕಾರ್ಜುನ್, ಜಿ.ಎಂ.ಸುರೇಶ್, ಎಸ್.ಲಿಂಗಮೂರ್ತಿ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!