ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೀದಿ ನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಸಂದರ್ಭ ನಟಿ ನಿವೇತಾ ಪೇತುರಾಜ್ ಅವರು ನೀಡಿರುವ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ.
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗಿರುವ ನಿವೇತಾ, ಚೆನ್ನೈನಲ್ಲಿ ಬೀದಿನಾಯಿಗಳ ಪರವಾಗಿ ನಡೆದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ‘ನಾಯಿ ಕಚ್ಚಿದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದಾರೆ.
‘ಬೀದಿ ನಾಯಿಗಳ ಬಗ್ಗೆ ಸಾಕಷ್ಟು ಭಯ ಹುಟ್ಟಿಸಲಾಗುತ್ತಿದೆ. ಒಂದು ವೇಳೆ ನಾಯಿ ಕಚ್ಚಿದರೆ ಅದನ್ನು ದೊಡ್ಡ ವಿಷಯ ಮಾಡಬೇಡಿ ಹಾಗೂ ಭಯ ಹರಡಬೇಡಿ. ಹಾಗಂತ ನಾಯಿ ಕಚ್ಚಿದರೆ ಪರವಾಗಿಲ್ಲ ಅಂತ ನಾನು ಹೇಳುತ್ತಿಲ್ಲ. ರೇಬಿಸ್ ಹರಡಿದರೆ ತುಂಬಾ ಕೆಟ್ಟಿದ್ದು. ಅದರಿಂದ ಆರೋಗ್ಯ ಕೆಡುತ್ತದೆ. ಆದರೆ ಭಯ ಹರಡುವುದರ ಬದಲು ಪರಿಹಾರ ಹುಡುಕೋಣ’ ಎಂದು ಹೇಳಿದ್ದಾರೆ.
‘ಬಾಲ್ಯದಿಂದಲೇ ಜನರಿಗೆ ಕರುಣೆಯ ಬಗ್ಗೆ ತಿಳಿಸಿಕೊಡಬೇಕು. ಯಾರಾದರೂ ತಪ್ಪು ಮಾಡಿದರೆ ಅವರನ್ನು ಕೊಂದುಬಿಡಿ ಅಂತ ನಾವು ಹೇಳಲ್ಲ. ಅದೇ ತಪ್ಪನ್ನು ನಾವು ಪ್ರಾಣಿಗಳ ವಿಷಯದಲ್ಲೂ ಮಾಡಬಾರದು. ಲಸಿಕೆ ಹಾಕಿಸುವುದು, ಸಂತಾನ ಹರಣ ಮಾಡಿಸುವುದು ಮುಂತಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರುಣೆ ಮತ್ತು ಜಾಗೃತಿ ಮೂಡಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿವೇತಾ ಪೇತುರಾಜ್ ಅವರ ಹೇಳಿಕೆಯನ್ನು ಹಲವರು ತೀವ್ರವಾಗಿ ಖಂಡಿಸುತ್ತಿದ್ದಾರೆ.

