ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಸದ್ಯ ವಿರಾಮ ಘೋಷಣೆಯಾಗಿದ್ದು, ಇದರ ನಡುವೆ ಇಂದು ಇಸ್ಲಾಮಾದ್ನಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಇದಕ್ಕಾಗಿ ಪಾಕಿಸ್ತಾನಕ್ಕೆ ಇರಾನ್ ನಿಯೋಗವೂ ತೆರಳಿದ್ದು, ಈ ವೇಳೆ ವಿಮಾನದಲ್ಲಿ ರಕ್ತಸಿಕ್ತ ಶಾಲಾ ಬ್ಯಾಗ್ಗಳು, ಶೂಗಳು, ಬಿಳಿ ಹೂವುಗಳು ಮತ್ತು ಮಿನಾಬ್ ಸಂತ್ರಸ್ತರ ಚಿತ್ರಗಳು ಪ್ರಯಾಣಿಸಿದವು.
ಸ್ಪೀಕರ್ ಮೊಹಮ್ಮದ್ ಬಾಖರ್ ಖಾಲೀಬಾಫ್ ನೇತೃತ್ವದ ಇರಾನ್ ನಿಯೋಗ ತೆರಳಿದ್ದ ವಿಮಾನದ ಮುಂಭಾಗದ ಸೀಟುಗಳಲ್ಲಿ ಯುದ್ಧದಲ್ಲಿ ಅಸುನೀಗಿದ ಮಕ್ಕಳ ಸವಿನೆನಪಿಗಾಗಿ ಶೂ, ರಕ್ತಸಿಕ್ತ ಶಾಲಾ ಬ್ಯಾಗ್ ಮತ್ತು ಅವರ ಫೋಟೋಗಳನ್ನು ಕೊಂಡೊಯ್ದಿದ್ದು, ಈ ಮೂಲಕ ಜಗತ್ತಿನ ಮುಂದೆ ಯುದ್ಧದ ಭೀಕರತೆಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಂಡ ಖಾಲೀಬಾಫ್, ನಾನು ಸಂಚರಿಸುವ ವಿಮಾನದಲ್ಲಿ ಇವರೇ ನನ್ನ ಜೊತೆಗಾರರು #Minab168 ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆಇಸ್ಲಾಮಾಬಾದ್ಗೆ ತೆರಳುತ್ತಿರುವ ಈ ನಿಯೋಗಕ್ಕೆ ‘ಮಿನಾಬ್ 168’ ಎಂದು ಹೆಸರಿಸಲಾಗಿದ್ದು, ನಾವು ಮಿನಾಬ್ನ ಮಕ್ಕಳನ್ನು ಮರೆಯುವುದಿಲ್ಲ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ .
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ನ ಮಿನಾಬ್ ಪಟ್ಟಣದ ‘ಶಜರೆ ತಯ್ಯಿಬೆ’ ಎಂಬ ಹೆಣ್ಣು ಮಕ್ಕಳ ಶಾಲೆಯ ಮೇಲೆ ದಾಳಿ ನಡೆಸಿದ್ದು, 160 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕೃತ್ಯವನ್ನು ಜಗತ್ತಿನ ಮುಂದೆ ಸಾರಲು ಇರಾನ್ ಮುಂದಾಗಿದೆ.



