ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಸರ್ಕಾರಿ ಹಾಸ್ಟೆಲ್ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸುವಂತಹ ಆರೋಪವೊಂದು ಇದೀಗ ರಾಜ್ಯ ರಾಜಕಾರಣ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಜೆ ಮುಗಿಸಿ ಮರಳಿದ ಬಾಲಕಿಯರ ಮೇಲಿನ ಅನುಮಾನದಿಂದ ಗರ್ಭಧಾರಣೆಯ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪಗಳು ಪುಣೆ ಜಿಲ್ಲೆಯ ಸರ್ಕಾರಿ ಬುಡಕಟ್ಟು ಬಾಲಕಿಯರ ಹಾಸ್ಟೆಲ್ ವಿರುದ್ಧ ಕೇಳಿಬಂದಿವೆ. ಈ ವಿಚಾರ ಸಾರ್ವಜನಿಕವಾಗಿ ಹೊರಬಿದ್ದ ಬೆನ್ನಲ್ಲೇ ಆಡಳಿತದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಸರ್ಕಾರಿ ಗರ್ಲ್ಸ್ ಹಾಸ್ಟೆಲ್‌ನಲ್ಲಿ ರಜೆಯಿಂದ ಹಿಂದಿರುಗಿದ ವಿದ್ಯಾರ್ಥಿನಿಯರಿಗೆ ಯುಪಿಟಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ ಎನ್ನಲಾಗಿದ್ದು, ಇದು ಬಾಲಕಿಯರ ಗೌಪ್ಯತೆ ಮತ್ತು ಘನತೆಯ ಮೇಲೆ ನೇರ ದಾಳಿ ಎಂದು ಮಹಿಳಾ ಸಂಘಟನೆಗಳು ಆರೋಪಿಸಿವೆ. ಈ ವಿಷಯವು ನಾಗ್ಪುರ ಚಳಿಗಾಲದ ಅಧಿವೇಶನದಲ್ಲೂ ಚರ್ಚೆಗೆ ಬಂದಿದ್ದು, ಶಾಸಕ ಸಂಜಯ್ ಖೋಡ್ಕೆ ಸರ್ಕಾರದಿಂದ ಸ್ಪಷ್ಟನೆ ಕೋರಿದ್ದರು.
ಪ್ರಕರಣದ ಗಂಭೀರತೆಯನ್ನು ಮನಗಂಡ ರಾಜ್ಯ ಸರ್ಕಾರ, ಇಂತಹ ಯಾವುದೇ ಕಡ್ಡಾಯ ನಿಯಮ, ಜಿಆರ್ ಅಥವಾ ಸುತ್ತೋಲೆ ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದೇ ವೇಳೆ, ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಿದ್ದು, ಇದು ತಾರತಮ್ಯಪೂರ್ಣ ಹಾಗೂ ಅಸಂವಿಧಾನಿಕ ನಡೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

