ಇತ್ತೀಚಿನ ಕಾಲದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ನಡವಳಿಕೆ ಹಾಗೂ ಶಿಸ್ತನ್ನು ಕಲಿಸುವುದು ಪೋಷಕರಿಗೆ ದೊಡ್ಡ ಹೊಣೆಗಾರಿಕೆಯಾಗಿದೆ. ಮಕ್ಕಳಿಗೆ ಕಾಳಜಿ, ಪ್ರೀತಿ ಮತ್ತು ರಕ್ಷಣೆ ನೀಡುವುದರ ಜೊತೆಗೆ ಶಿಸ್ತಿನ ಪಾಠವನ್ನು ಸರಿಯಾದ ರೀತಿಯಲ್ಲಿ ಕಲಿಸುವುದು ಅತ್ಯಂತ ಅಗತ್ಯ. ಹಾಗಂತ ಹೊಡೆಯುವುದು ಅಥವಾ ಭಯಪಟ್ಟು ಶಿಸ್ತನ್ನು ಕಲಿಸುವುದು, ಮಕ್ಕಳ ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದರೆ ಪೋಷಕರು ಸೂಕ್ತ ವಿಧಾನಗಳನ್ನು ಅನುಸರಿಸಿದರೆ, ಮಕ್ಕಳು ಶಿಸ್ತುಬದ್ಧವಾಗಿದ್ದರೆ ಸಹಜವಾಗಿ ಭವಿಷ್ಯದಲ್ಲಿ ಒಳ್ಳೆಯ ವ್ಯಕ್ತಿತ್ವ ಹೊಂದಲು ಸಾಧ್ಯ.
- ಪಾಸಿಟಿವ್ ಪ್ರೋತ್ಸಾಹ ನೀಡುವುದು: ಮಕ್ಕಳಿಗೆ ಶ್ಲಾಘನೆ ನೀಡಿ ಪ್ರೋತ್ಸಾಹಿಸುವುದು ಮುಖ್ಯ. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಸುತ್ತಮುತ್ತಲಿನ ಜನರೊಂದಿಗೆ ಪಾಸಿಟಿವ್ ಮನೋಭಾವವನ್ನು ಬೆಳೆಸುತ್ತದೆ. ತಪ್ಪು ಮಾಡಿದಾಗ ಮಕ್ಕಳನ್ನು ಶಾಂತವಾಗಿ ಕರೆದು ಮಾತನಾಡಿ, ಸರಿಯಾದ ಮಾರ್ಗದರ್ಶನ ನೀಡುವುದರಿಂದ ಅವರು ತಮ್ಮ ತಪ್ಪನ್ನು ಅರಿತು ಮುಂದಕ್ಕೆ ಸರಿಯಾದ ಕ್ರಮ ಕೈಗೊಳ್ಳುತ್ತಾರೆ.
- ಪರಿಸ್ಥಿತಿಯ ಅರಿವು ಕಲಿಸುವುದು: ಮಕ್ಕಳಿಗೆ ತಮ್ಮ ವರ್ತನೆಯ ಪರಿಣಾಮಗಳನ್ನು ವಿವರಿಸುವುದು ಮುಖ್ಯ. ಉದಾಹರಣೆಗೆ, ಹೋಮ್ ವರ್ಕ್ ಮಾಡಲು ನಿರಾಕರಿಸಿದಾಗ ಅದರಿಂದ ಏನು ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ವಿವರಿಸುವುದು, ಮಕ್ಕಳಿಗೆ ಶಿಸ್ತುಬದ್ಧವಾಗಿ ನಡೆದುಕೊಳ್ಳಲು ನೆರವಾಗುತ್ತದೆ.
- ಕೆಲಸದ ಬಗ್ಗೆ ಕಟ್ಟುನಿಟ್ಟಿನ ನಿಯಮಗಳು: ಮಕ್ಕಳಿಗೆ ನಿತ್ಯಕಾಲದ ಕೆಲಸ ಮತ್ತು ಸಣ್ಣ ಜವಾಬ್ದಾರಿಗಳನ್ನು ನೀಡುವುದು ಶಿಸ್ತುಬದ್ಧತೆಯನ್ನು ತರಲು ಬಹಳ ಮುಖ್ಯ. ಪೋಷಕರು ಈ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವ ಮೂಲಕ, ಮಕ್ಕಳಲ್ಲಿ ಕೆಲಸವನ್ನು ಪೂರ್ಣವಾಗಿ ಮಾಡಬೇಕೆಂಬ ಜವಾಬ್ದಾರಿ ಮನೋಭಾವವನ್ನು ಬೆಳೆಸಬಹುದು.
- ಮಿತಿಗಳನ್ನು ನಿಗದಿಪಡಿಸುವುದು: ಮಕ್ಕಳಿಗೆ ಸ್ಪಷ್ಟ ಮಿತಿಗಳು ಮತ್ತು ನಿಯಮಗಳನ್ನು ಕಲಿಸುವುದು ಅವರ ಶಿಸ್ತಿನ ಬೆಳವಣಿಗೆಯನ್ನು ಸಹಾಯ ಮಾಡುತ್ತದೆ. ತಪ್ಪು ಮಾಡುವ ಮುನ್ನ, ಮಿತಿಗಳನ್ನು ಮೀರುವುದರಿಂದ ಸಂಭವಿಸುವ ಪರಿಣಾಮಗಳನ್ನು ತಿಳಿಸುವುದರಿಂದ ಮಕ್ಕಳು ಜವಾಬ್ದಾರಿತನದಿಂದ ನಡೆದುಕೊಳ್ಳುತ್ತಾರೆ.
- ಭಾವನೆಗಳನ್ನು ವ್ಯಕ್ತಪಡಿಸುವುದು: ಮಕ್ಕಳು ತಮ್ಮ ಭಾವನೆಗಳನ್ನು ಸೂಕ್ತ ರೀತಿಯಲ್ಲಿ ಹೇಳಿಕೊಳ್ಳಲು ಕಲಿತರೆ, ಅತಿಯಾದ ಕೋಪ ಅಥವಾ ಬೇಸರ ತೋರಿಸದೆ, ಶಾಂತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.