ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷ ಪ್ರಾಯದ ಪುಟಾಣಿಯೊಬ್ಬ ತನ್ನ ಅಮ್ಮ ಚಾಕ್ಲೆಟ್ ಕದ್ದಿದ್ದಾಳೆ ಅವಳನ್ನು ಜೈಲಿಗೆ ಹಾಕಿ ಎಂದು ಪೊಲೀಸರಿಗೆ ದೂರು ನೀಡಿದ ತಮಾಷೆಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಅಮ್ಮ ನನಗೆ ಚಾಕ್ಲೆಟ್ ತಿನ್ನಲು ಬಿಡುವುದಿಲ್ಲ. ಕೆನ್ನೆಗೆ ಹೊಡೆದಿದ್ದಾಳೆ. ಅವಳನ್ನು ಜೈಲಿಗೆ ಹಾಕಿ’ ಎಂದು ಬುರ್ಹಾನಪುರ ದೆಡತಲಾಯಿ ಪೊಲೀಸ್ ಠಾಣೆಯಲ್ಲಿ ಬಾಲಕ ಭಾನುವಾರ ದೂರು ನೀಡಿದ್ದಾನೆ.
ಪುಟಾಣಿ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡುತ್ತಿರುವ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಬ್ ಇನ್ಸ್‌ಸ್ಪೆಕ್ಟರ್ ಪ್ರಿಯಾಂಕಾ, ಪುಟಾಣಿಯ ದೂರು ಬರೆದುಕೊಳ್ಳುತ್ತಿರುವುದು, ದೂರಿನ ಪ್ರತಿಗೆ ಸಹಿ ಹಾಕುವಂತೆ ಪುಟಾಣಿಯಲ್ಲಿ ಹೇಳುತ್ತಿರುವುದು, ಅದಕ್ಕೆ ಆತ ದೂರಿನ ಪ್ರತಿಯ ಮೇಲೆ ಕೆಲವು ಗೆರೆ ಎಳೆಯುತ್ತಿರುವ ಮುದ್ದಾದ ಕ್ಷಣಗಳು ವಿಡಿಯೊದಲ್ಲಿ ದಾಖಲಾಗಿದೆ.
ಈ ನಡುವೆ ಪ್ರಿಯಾಂಕ, ಪುಟಾಣಿ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಬುರ್ಹಾನಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಭಯ ಇಲ್ಲದೆ ಯಾರು ಬೇಕಾದರು ಪೊಲೀಸ್ ಠಾಣೆಗೆ ಬರಬಹುದು ಎನ್ನುವುದನ್ನು ಈ ಘಟನೆ ಸಾಕ್ಷೀಕರಿಸಿದೆ ಎಂದಿದ್ದಾರೆ.