ಮನೆಗೆ ನುಗ್ಗಿ ಕಳ್ಳರ ಕೈಚಳಕ: ವೃದ್ಧೆಗೆ ವಂಚಿಸಿ ಚಿನ್ನಾಭರಣ ಕಳವು.. ಆರೋಪಿಗಳು ಅರೆಸ್ಟ್

ಹೊಸದಿಗಂತ ಮಂಡ್ಯ :

ಮಳವಳ್ಳಿ ತಾಲೂಕಿನಲ್ಲಿ ನಡೆದ ಮನೆ ಕಳವು ಹಾಗೂ ವೃದ್ಧೆಯನ್ನು ವಂಚಿಸಿ ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 540 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಎಸ್.ಪಿ. ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ವಿಜಯನಗರದ ಸಯ್ಯದ್ ಅಹ್ಮದ್ (43), ಬೆಂಗಳೂರಿನ ದೇವಸಂದ್ರ ನಿವಾಸಿ ತಸ್ಲೀಂಪಾಷಾ (43) ಹಾಗೂ ಬನ್ನೇರುಘಟ್ಟದ ಮುನಾಜೀರ್ (45) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.

ಮಳವಳ್ಳಿ ತಾಲೂಕು ಹೊಸದೊಡ್ಡಿ ಗ್ರಾಮದ ಗೋವಿಂದಯ್ಯ ಅವರು ನಮ್ಮ ಮನೆಯಲ್ಲಿ ಕಳ್ಳತನ ನಡೆದು 4.90 ಲಕ್ಷ ರೂ. ವೌಲ್ಯದ 75 ಗ್ರಾಂ ಚಿನ್ನಾರಣಗಳನ್ನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು 2025ರ ಮಾ. 6ರಂದು ದೂರು ನೀಡಿದ್ದರು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ಪತ್ತೆಗೆ ಕಾರ್ಯಾಚರಣೆ ರೂಪಿಸಲಾಗಿತ್ತು ಎಂದರು.

ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ಸಯ್ಯದ್ ಅಹ್ಮದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಿ ಅವರಿಂದ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಕಾರು ಸೇರಿದಂತೆ 25.63 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!