ಹೊಸ ದಿಗಂತ ವರದಿ, ಯಲ್ಲಾಪುರ :
ತಾಲೂಕಿನ ಉಮ್ಮಚಗಿಯಲ್ಲಿ ಶಿಕ್ಷಕಿಯೊಬ್ಬರ ಮನೆಯ ಬಾಗಿಲನ್ನು ಮುರಿದು ಮನೆಯೊಳಗಿದ್ದ ಕಪಾಟಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಬಂಗಾರದ ಆಭರಣ ಹಾಗೂ ಒಂದು ಲಕ್ಷ ರೂ ನಗದು ಹಣವನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.
ತಾಲೂಕಿನ ಉಮ್ಮಚಗಿಯ ವಿದ್ಯಾರಣ್ಯ ಬಡಾವಣೆಯ ನಿವಾಸಿ, ಶಿಕ್ಷಕಿ ಜಯಶ್ರೀ ಸೀತಾರಾಮ ಗಾಂವಕರ್ ಅವರ ಮನೆಯಲ್ಲಿ ಜು.26ರಂದು ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನವಾಗಿದೆ
ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂ ನೊಳಗೆ ಕಪಾಟಿನಲ್ಲಿ ಇಟ್ಟಿದ್ದ 96 ಸಾವಿರ ರೂ ಮೌಲ್ಯದ ಅಂದಾಜು 48 ಗ್ರಾಂ ಬಂಗಾರದ ಕರಿಮಣಿ ಸರ, 82 ಸಾವಿರ ರೂ ಮೌಲ್ಯದ 40 ಗ್ರಾಂ ತೂಕದ ಬಂಗಾರದ ಸರ, 90 ಸಾವಿರ ರೂ ಮೌಲ್ಯದ 30 ಗ್ರಾಂ ತೂಕದ 2 ಬಂಗಾರದ ಬಳೆ, 60 ಸಾವಿರ ರೂ ಮೌಲ್ಯದ 15 ಗ್ರಾಂ ತೂಕದ ಪಾಟಲಿ,
30 ಸಾವಿರ ರೂ ಮೌಲ್ಯದ 6 ಗ್ರಾಮ ಬಂಗಾರದ ಚೈನ್, 60 ಸಾವಿರ ರೂ ಮೌಲ್ಯದ 10 ಗ್ರಾಂ ಬಂಗಾರದ ಕೆನ್ನೆ ಸರಪಳಿ-2, 60 ಸಾವಿರ ರೂ ಮೌಲ್ಯದ 15 ಗ್ರಾಂ ತೂಕದ ಬಂಗಾರದ ಉಂಗುರ-4, 25 ಸಾವಿರ ರೂ ಮೌಲ್ಯದ 11 ಗ್ರಾಂ ತೂಕದ ಬಂಗಾರದ ನೆಕ್ಸೆಸ್ ಹಾಗೂ 1 ಲಕ್ಷ ರೂ ನಗದು ಹಣ ಸೇರಿದಂತೆ ಒಟ್ಟೂ 6,03,000 ರೂ ಮೌಲ್ಯದ ಸೊತ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಈಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.