ಹೊಸ ದಿಗಂತ ವರದಿ, ಮುಂಡಗೋಡ:
ತಾಲೂಕಿನ ಯಲ್ಲಾಪೂರ ರಸ್ತೆಯಲ್ಲಿನ ಟಿಬೆಟಿಯನ್ ಲಾಮಾ ಕ್ಯಾಂಪ್ 1 ರ ಕ್ರಾಸ್ ಬಳಿ ಇರುವ ಮೊಬೈಲ್ ಅಂಗಡಿಯ ಮೇಲೆ ಹಾಕಿದ್ದ ಶೀಟ್ ಹಾಗೂ ಸಿಲ್ಲಿಂಗ್ ಮಾಡಿದ್ದನ್ನು ಕಟ್ ಮಾಡಿ ಅಂಗಡಿಯ ಒಳಗೆ ಇಳಿದು ಯಾರೋ ಕಳ್ಳರು ಬೆಲೆ ಬಾಳುವ ವಿವಿಧ ಕಂಪನಿಯ 8ಕ್ಕೂ ಹೆಚ್ಚು ಮೊಬೈಲ್ ಪೋನ್‌ಗಳನ್ನು ಕಳ್ಳತನ ಮಾಡಿದ ಘಟನೆ ಶನಿವಾರ ಜರಗಿದೆ.
ಲಾಮಾ ಕ್ಯಾಂಪ್ 1ರ ಕ್ರಾಸ್ ಬಳಿ ಇರುವ ಮಂಜುನಾಥ ಶೇಟ್ ಎಂಬುವರ ಮೊಬೈಲ್ ಅಂಗಡಿ ಕಳ್ಳತನವಾಗಿದೆ. ಪ್ರತಿದಿನ ದಂತೆ ಶುಕ್ರವಾರ ರಾತ್ರಿ ಮೊಬೈಲ್ ಅಂಗಡಿಯನ್ನು ಬಂದ್ ಮಾಡಿ ಹೋಗಿದ್ದಾರೆ. ಹೋದ ನಂತರ ಯಾರೋ ಕಳ್ಳರು ಅಂಗಡಿಗೆ ಮೇಲ್ಭಾಗಕ್ಕೆ ಹಾಕಿದ್ದ ಶೀಟ್ ಹಾಗೂ ಸಿಲ್ಲಿಂಗ್ ಮಾಡಿದ್ದನ್ನು ಕಟ್ ಮಾಡಿ ಅಂಗಡಿಯ ಒಳಗೆ ಇಳಿದು ಬೆಲೆ ಬಾಳುವ ಬೇರೆ ಬೇರೆ ಕಂಪನಿಯ 8 ಮೊಬೈಲ್ ಪೋನ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಹಾಗೂ ಅಂಗಡಿಯಲ್ಲೆ ರಟ್ಟಿನ ಬಾಕ್ಸನಲ್ಲಿ ಇಟ್ಟಿದ್ದ ಹಣ ಸೇರಿದಂತೆ ಇನ್ನು ಹಲವು ಪೋನಗಳು ಅಲ್ಲೆ ಇದ್ದರು ಅವುಗಳನ್ನು ಕಳ್ಳರು ಬಿಟ್ಟು ಹೋಗಿರುವುದು ಕಂಡು ಬಂದಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲ್ಲಿಯ ಕೆಲವು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದು, ಟಿಬೆಟಿಯನ್ ಲಾಮಾ ಕ್ಯಾಂಪ್‌ನ ಟಿಬೆಟಿಯನ್ ಲಾಮಾಗಳು ಕಳ್ಳತನ ಮಾಡಿದ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಮಾಹಿತಿ ದೊರೆತಿದ್ದು, ಲಾಮಾಗಳನ್ನು ವಿಚಾರಣೆಗೆ ತರಲು ಪೊಲೀಸರು ಟಿಬೆಟಿಯನ್ನರ ಪರವಾನಿಗೆ ಪಡೆದು ಕಳ್ಳರನ್ನು ಕರೆತರಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಈ ಬಗ್ಗೆ ಸ್ಥಳಿಯರು ಮಾತನಾಡುತ್ತಿರುವುದು ಕಂಡು ಬಂದಿದೆ.