ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ದೇವಾಲಯಗಳಿಗೆ ಕನ್ನ ಹಾಕಿ ಆಭರಣ, ಹುಂಡಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯ ಸಿದ್ದಿವಿನಾಯಕ ಮಹಾಗಣಪತಿ ದೇವಾಲಯದಲ್ಲಿ ನಡೆದಿದ್ದ ದೇವರ ವಿಗ್ರಹ ಹಾಗೂ ಇತರ ವಸ್ತುಗಳ ಕಳವು ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಕದ್ದಿದ್ದ ಪಂಚಲೋಹದ ಗಣೇಶ ವಿಗ್ರಹ, ಐದು ಕೆ.ಜಿ. ಬೆಳ್ಳಿ ವಸ್ತುಗಳು, 67 ಗ್ರಾಂ ಚಿನ್ನಾಭರಣ, 1,426 ಗ್ರಾಂ ಹಿತ್ತಾಳೆ ಸೇರಿದಂತೆ 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರವೀಣ್ ಭಟ್ ಹಲವು ವರ್ಷಗಳಿಂದ ದೇವಾಲಯಗಳಲ್ಲಿಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ. ಈ ಹಿಂದೆ ಶಿವಮೊಗ್ಗ, ಉಡುಪಿ , ಬೆಂಗಳೂರು, ದಕ್ಷಿಣ ಕನ್ನಡದಲ್ಲಿ 10 ದೇವಾಲಯ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. 2016ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿ 2020ರವರೆಗೂ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಜೈಲಿನಲ್ಲಿಯೂ ಪೂಜಾರಿಯಾಗಿ ಕೆಲಸ ಮಾಡಿದ್ದ.
ಪೂಜಾರಿಗಳ ವೇಷದಲ್ಲಿ ಕಳ್ಳತನ ಮಾಡ್ತಿದ್ದವರು ಅರೆಸ್ಟ್! ₹14 ಲಕ್ಷ ಮೌಲ್ಯದ ವಸ್ತುಗಳು ವಶ
