March 16, 2026
Monday, March 16, 2026
spot_img

ಕಾಫಿ, ಕರಿಮೆಣಸು, ವಾಹನ, ಜಾನುವಾರು.. ಎಲ್ಲವನ್ನೂ ಕದ್ದ ಕಳ್ಳರು ಅರೆಸ್ಟ್‌

ಹೊಸದಿಗಂತ ವರದಿ ಮಡಿಕೇರಿ:

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಗಳಿಂದ ಕಾಫಿ ಹಾಗೂ ಕರಿಮೆಣಸು ಕಳವು ಮಾಡಿದ್ದ ಹಾಗೂ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ‌.

ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ನಿವಾಸಿ ಕೆ.ಎಂ. ಕೆ.ಎಂ.ಉಬೈದ್ (36), ಕೇರಳ ರಾಜ್ಯದ ಮಾನಂದವಾಡಿಯ ಕಾಟಿಕೊಳಂ ನಿವಾಸಿ ಅಬ್ದುಲ್ ರೆಹಮಾನ್.ಪಿ (34) ಹಾಗೂ ಮಡಿಕೇರಿ ತಾಲೂಕಿನ ಕೊಟ್ಟಮುಡಿ ನಿವಾಸಿ ಪಿ.ಎಂ.ಮುಜೀಬ್ (36) ಎಂಬವರೇ ಬಂಧಿತ ಆರೋಪಿಗಳು.

ಅವರಿಂದ 1,43,500ರೂ.‌ನಗದು, KLI7-B-6927 ಮಹೀಂದ್ರ ಸ್ಕಾರ್ಪಿಯೋ, KL-12-0355 ಮಹೀಂದ್ರ ಬೊಲೇರೊ ಪಿಕ್‌ ಅಪ್, KL37-0916 ಚವರ್ ಲೆಟ್ ಸೇರಿದಂತೆ ನಾಲ್ಕು ವಾಹನ ಮತ್ತು ಎರಡು ಎತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಎತ್ತುಗಳು ಹಾಗೂ ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ KA-51-B-6490 ಮಹಿಂದ್ರ ಬೊಲೇರೋ ವಾಹನವನ್ನು ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ತಿಳಿಸಿದ್ದಾರೆ.

ಗೋಣಿಕೊಪ್ಪ ಠಾಣೆ ವ್ಯಾಪ್ತಿಯ ದೇವರಪುರ ಗ್ರಾಮದ ನಿವಾಸಿ ಎಂ.ಎಂ. ಉತ್ತಯ್ಯ ಎಂಬವರಿರಿಗೆ ಸೇರಿದ ಕಣದಿಂದ ಕಳೆದ ಡಿ.21ರಂದು ಅಂದಾಜು 15 ಚೀಲ‌ ಕಾಫಿ ಹಾಗೂ ಚೆನ್ನಂಗೊಲ್ಲಿ ಹೆಬ್ಬಾಲೆ ಗ್ರಾಮದ ನಿವಾಸಿ ಟಿ.ಹೆಚ್.ಹನೀಫ್ ಎಂಬವರಿಗೆ ಸೇರಿದ ಕಣದಿಂದ ಫೆ.19 ಅಂದಾಜು 11 ಚೀಲ ಕರಿಮೆಣಸು ಕಳವು ಮಾಡಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಅಲ್ಲದೆ ಫೆ.28ರಂದು ತಿತಿಮತಿ ಉಪಠಾಣೆ ಸಮೀಪ ಹೆದ್ದಾರಿಯಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ದೊರೆತ ಮೇರೆಗೆ ವಾಹನ ತಪಾಸಣೆ ನಡೆಸುವ ಸಂದರ್ಭ ಒಂದು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಎತ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದ್ದು, ಈ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 4, 5, 6, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ & ಸಂರಕ್ಷಣಾ ಕಾಯ್ದೆ & 11(1) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !