ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್‌ಮಸ್ ಹಾಗೂ ವರ್ಷದ ಅಂತ್ಯದ ಸತತ ರಜೆಗಳ ಹಿನ್ನೆಲೆಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸದ್ಯ ಶ್ರೀವಾರಿ ದರ್ಶನಕ್ಕೆ ಸುಮಾರು 30 ಗಂಟೆಗಳವರೆಗೆ ಸಮಯ ಹಿಡಿಯುತ್ತಿದೆ. ಈ ಅತಿಯಾದ ಜನಸಂದಣಿ ಹಿನ್ನೆಲೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಕ್ತರಿಗೆ ಮಹತ್ವದ ಸೂಚನೆ ನೀಡಿದೆ.
ಡಿಸೆಂಬರ್ 27, 28 ಮತ್ತು 29ರಂದು ಮೂರು ದಿನಗಳ ಕಾಲ ಶ್ರೀವಾಣಿ ಆಫ್‌ಲೈನ್ ದರ್ಶನ ಟಿಕೆಟ್‌ಗಳ ವಿತರಣೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ ಎಂದು ಟಿಟಿಡಿ ಪ್ರಕಟಿಸಿದೆ. ಭಕ್ತರ ಸಂಖ್ಯೆ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಟಿಕೆಟ್‌ಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಈ ಅವಧಿಯಲ್ಲಿ ತಿರುಮಲಕ್ಕೆ ತೆರಳಲು ಯೋಜನೆ ರೂಪಿಸುತ್ತಿರುವ ಭಕ್ತರು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಸಿದ್ಧಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಇದರ ಜೊತೆಗೆ ಅಂಗಪ್ರದಕ್ಷಿಣೆ ಟೋಕನ್‌ಗಳ ಜಾರಿಯಲ್ಲಿಯೂ ಬದಲಾವಣೆ ತರಲಾಗಿದೆ. ಲಕ್ಕಿ ಡಿಪ್ ಪದ್ಧತಿಯನ್ನು ರದ್ದುಪಡಿಸಿ, ಫಸ್ಟ್ ಇನ್ ಫಸ್ಟ್ ಔಟ್ ವಿಧಾನವನ್ನು ಜಾರಿಗೊಳಿಸಲಾಗಿದೆ. ಅಂಗಪ್ರದಕ್ಷಿಣೆ ಟೋಕನ್‌ಗಳನ್ನು ಮೂರು ತಿಂಗಳು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಭಕ್ತರು ಮುಂಗಡವಾಗಿ ಬುಕ್ ಮಾಡಿರಬೇಕು.
ಹೀಗಾಗಿ ಮುಂದಿನ ಕೆಲ ದಿನಗಳಲ್ಲಿ ತಿರುಮಲಕ್ಕೆ ಭೇಟಿ ನೀಡುವವರು ಟಿಟಿಡಿ ನೀಡಿರುವ ಹೊಸ ಮಾರ್ಗಸೂಚಿಗಳನ್ನು ತಿಳಿದುಕೊಂಡು ಮಾತ್ರ ಪ್ರಯಾಣ ಮುಂದುವರಿಸುವುದು ಒಳಿತು.

