ಹೊಸದಿಗಂತ ಶಿರಸಿ:
ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಶಿಕ್ಷಣ ಇಲಾಖೆ ತಂದಿರುವ ಇತ್ತೀಚಿನ ಬದಲಾವಣೆಗಳ ವಿರುದ್ಧ ಮಾಜಿ ಶಿಕ್ಷಣ ಸಚಿವರು ಹಾಗೂ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರವು ‘ವಿದ್ಯಾರ್ಥಿ ವಿರೋಧಿ’ ಮತ್ತು ರಾಜ್ಯದ ಶೈಕ್ಷಣಿಕ ಘನತೆಗೆ ತಂದ ಧಕ್ಕೆ ಎಂದು ಅವರು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಶಕಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ ತ್ರಿಭಾಷಾ ಸೂತ್ರಕ್ಕೆ ಸಚಿವ ಮಧು ಬಂಗಾರಪ್ಪ ಅವರು ಕೊಡಲಿ ಪೆಟ್ಟು ನೀಡಿದ್ದಾರೆ. ತೃತೀಯ ಭಾಷೆಯ ಅಂಕಗಳನ್ನು ಕೈಬಿಟ್ಟು ಕೇವಲ ಗ್ರೇಡ್‌ಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸಲಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್ ಅನ್ನು ಸಂವಹನಕ್ಕಾಗಿ ಹಾಗೂ ಹಿಂದಿ/ಸಂಸ್ಕೃತವನ್ನು ರಾಷ್ಟ್ರೀಯ ಭಾವನೆಯಿಂದ ಕಲಿಯುತ್ತಿದ್ದ ಮಕ್ಕಳಿಗೆ ಈಗ ತೃತೀಯ ಭಾಷೆಯು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಾಗಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳ ಭಾಷಾ ಸಾಮರ್ಥ್ಯ ಕುಂಠಿತಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.



